ವಿಶಾಖಪಟ್ಟಣ: ನಗರದ ಕುಟುಂಬವೊಂದು ತನ್ನ ಭಾವಿ ಅಳಿಯನಿಗಾಗಿ 125 ಭಕ್ಷ್ಯಗಳ ಭೋಜನ ಔತಣಕೂಟ ಏರ್ಪಡಿಸಿದ್ದು ಈಗ ಭಾರಿ ಸುದ್ದಿಯಾಗಿದೆ. ಶೃಂಗವರಪುಕೋಟ ಪಟ್ಟಣದ ಸಾಫ್ಟ್ ವೇರ್ ಇಂಜಿನಿಯರ್ ಕಪುಗಂಟಿ ಚೈತನ್ಯ ಹಾಗೂ ವಿಶಾಖಪಟ್ಟಣದ ನಿಹಾರಿಕಾ ಜೊತೆ ನಿಶ್ಚಿತಾರ್ಥ ನಡೆದಿತ್ತು. ಇವರು ಮುಂದಿನ ವರ್ಷ ಮಾರ್ಚ್ 9 ರಂದು ಮದುವೆಯಾಗಲು ನಿರ್ಧರಿಸಿದ್ದಾರೆ.
ನಿಶ್ಚಿತಾರ್ಥದ ನಂತರದ ಮೊದಲ ಹಬ್ಬವಾದ್ದರಿಂದ ಅಳಿಯನನ್ನು ದಸರಾ ಹಬ್ಬಕ್ಕೆ ಮನೆಗೆ ಆಹ್ವಾನಿಸಲಾಗಿತ್ತು. ಆದರೆ ಅತ್ತೆಯ ಮನೆಗೆ ಬಂದಾಗ ಮೇಜಿನ ಮೇಲಿದ್ದ ಭಕ್ಷ್ಯಗಳನ್ನು ನೋಡಿ ಅಳಿಯನಿಗೆ ತುಂಬಾ ಆಶ್ಚರ್ಯವಾಯಿತು. ಜೊತೆಗೆ ಸಿಕ್ಕಾಪಟ್ಟೆ ಖುಷಿಯೂ ಆಯಿತು. ಅಲ್ಲಿ ಆತನಿಗಾಗಿ 125 ಬಗೆಯ ಖಾದ್ಯಗಳನ್ನು ಊಟಕ್ಕಾಗಿ ರೆಡಿ ಮಾಡಿ ಜೋಡಿಸಲಾಗಿತ್ತು.
ಈ ಏರ್ಪಾಡನ್ನು ನೋಡಿ ಅಳಿಯನಿಗೆ ತುಂಬಾ ಸಂತೋಷವಾಯಿತು. ಇಂಥ ಅದ್ಧೂರಿ ಔತಣವನ್ನು ನಿರೀಕ್ಷಿಸಿರಲಿಲ್ಲ ಎಂದು ಅಳಿಯ ಪ್ರತಿಕ್ರಿಯಿಸಿದ್ದಾರೆ. 125ರ ಪೈಕಿ 95 ಖಾದ್ಯಗಳನ್ನು ಹೊರಗಿನಿಂದ ತಂದಿದ್ದರೆ, ಇನ್ನುಳಿದವನ್ನು ಮನೆಯಲ್ಲಿಯೇ ತಯಾರಿಸಲಾಗಿತ್ತು. ಟೇಬಲ್ ಮೇಲಿದ್ದ ಎಲ್ಲಾ ತಿನಿಸುಗಳನ್ನು ನೋಡಿದ ಅಳಿಯನಿಗೆ ಕೆಲವು ತಿನಿಸುಗಳ ಹೆಸರೇ ತಿಳಿದಿರಲಿಲ್ಲ.