ನವದೆಹಲಿ: ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ ಜನ್ಮದಿನ. ಅದೇ ದಿನ ಮೋದಿ ಅವರಿಗೆ ಉಡುಗೊರೆಯಾಗಿ ಬಂದ 1,200ಕ್ಕೂ ಹೆಚ್ಚು ವಸ್ತುಗಳನ್ನು ಹರಾಜು ಮಾಡಲು ನಿರ್ಧರಿಸಲಾಗಿದೆ. ಅಲ್ಲದೇ, ಗಿಫ್ಟ್ಗಳ ಹರಾಜಿನಿಂದ ಬಂದ ಹಣವು ನಮಾಮಿ ಗಂಗಾ ಮಿಷನ್‌ಗೆ ಬಳಕೆಯಾಗಲಿದೆ.
ಕ್ರೀಡಾಪಟುಗಳು, ರಾಜಕಾರಣಿಗಳು ಸೇರಿದಂತೆ ಸಮಾಜದ ವಿವಿಧ ಸ್ತರದ ಜನರು ಪ್ರಧಾನಿ ಮೋದಿ ಅವರಿಗೆ ನೀಡಿರುವ ಉಡುಗೊರೆಗಳನ್ನು ಸೆಪ್ಟೆಂಬರ್ 17ರಿಂದ pmmementos.gov.in ವೆಬ್ ಪೋರ್ಟಲ್ ಮೂಲಕ ಹರಾಜನ್ನು ನಡೆಸಲಾಗುವುದು ಮತ್ತು ಅಕ್ಟೋಬರ್ 2ರಂದು ಈ ಹರಾಜು ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ಉಡುಗೊರೆಗಳನ್ನು ಪ್ರದರ್ಶಿಸುವ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ನ ಮಹಾನಿರ್ದೇಶಕ ಅದ್ವೈತ ಗಡನಾಯಕ್ ತಿಳಿಸಿದ್ದಾರೆ.
ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿನಿಧಿಸುವ ಸಾಮಾನ್ಯ ವ್ಯಕ್ತಿಗಳು ಮತ್ತು ವಿವಿಧ ಗಣ್ಯರು ಪ್ರಸ್ತುತಪಡಿಸಿದ ಉಡುಗೊರೆಗಳು ಸೇರಿದಂತೆ ಉತ್ತಮ ಶ್ರೇಣಿಯ ಉಡುಗೊರೆಗಳನ್ನು ಹರಾಜು ಮಾಡಲಾಗುವುದು. ಉಡುಗೊರೆಗಳ ಮೂಲ ಬೆಲೆ 100 ರಿಂದ 10 ಲಕ್ಷ ರೂ.ಗಳವರೆಗೆ ಇದೆ ಎಂದು ಅವರು ಹೇಳಿದ್ದಾರೆ.
ಈ ಉಡುಗೊರೆಗಳ ಪಟ್ಟಿಯಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಉಡುಗೊರೆಯಾಗಿ ನೀಡಿದ ರಾಣಿ ಕಮಲಾಪತಿ ಪ್ರತಿಮೆ, ಹನುಮಾನ್ ವಿಗ್ರಹ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಉಡುಗೊರೆಯಾಗಿ ನೀಡಿರುವ ಸೂರ್ಯ ವರ್ಣಚಿತ್ರ ಮತ್ತು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಉಡುಗೊರೆಯಾಗಿ ನೀಡಿದ ತ್ರಿಶೂಲ ಕೂಡ ಸೇರಿದೆ.
ಅಲ್ಲದೇ, ಎನ್‌ಸಿಪಿ ನಾಯಕ ಅಜಿತ್ ಪವಾರ್ ಉಡುಗೊರೆಯಾಗಿ ನೀಡಿದ ಕೊಲ್ಲಾಪುರದಲ್ಲಿರುವ ಮಹಾಲಕ್ಷ್ಮಿ ದೇವಿಯ ಪ್ರತಿಮೆ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಉಡುಗೊರೆಯಾಗಿ ನೀಡಿದ ವೆಂಕಟೇಶ್ವರನ ಫೋಟೋ ಫ್ರೇಮ್ ಸಹ ಒಳಗೊಂಡಿದೆ.
ಜೊತೆಗೆ ಪದಕ ವಿಜೇತ ಆಟಗಾರರು ಸಹಿ ಮಾಡಿದ ಟಿ-ಶರ್ಟ್‌ಗಳು, ಬಾಕ್ಸಿಂಗ್ ಕೈಗವಸುಗಳು, ಜಾವೆಲಿನ್ ಮತ್ತು ರಾಕೆಟ್‌ಗಳಂತಹ ಕ್ರೀಡಾ ವಸ್ತುಗಳ ವಿಶೇಷ ಸಂಗ್ರಹ ವಸ್ತುಗಳ ಕೂಡ ಇವೆ. ಈ ಹರಾಜು ಪ್ರಕ್ರಿಯೆಯು ಪ್ರಧಾನಿ ಮೋದಿ ಸ್ವೀಕರಿಸಿದ ಉಡುಗೊರೆಗಳ ಇ-ಹರಾಜಿನ ನಾಲ್ಕನೇ ಆವೃತ್ತಿಯಾಗಿದೆ ಎಂದು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ನ ನಿರ್ದೇಶಕ ತೆಮ್ಸುನಾರೊ ಜಮೀರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಾಜಭವನ ಕರ್ತವ್ಯ ಭವನ, ರಾಜಸ್ಥಾನ ಕರ್ತವ್ಯ ಸ್ಥಾನವಾಗಲಿ: ಶಶಿ ತರೂರ್ ಟೀಕೆ