ನವದೆಹಲಿ: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಸಿಬಿಐ ದಾಖಲಿಸಿರುವ ಪ್ರಕರಣಗಳ ತನಿಖೆ ವಿಳಂಬವಾಗುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. 12 ವರ್ಷಗಳಿಂದ ತನಿಖೆ ವಿಳಂಬವಾಗುತ್ತಿರುವುದರ ವರದಿ ನೀಡಲು ಕೋರ್ಟ್ ಸೂಚಿಸಿದೆ.
2009 ರಲ್ಲಿ ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಸಿಬಿಐ ಗಾಲಿ ಜನಾರ್ದನ ರೆಡ್ಡಿ ಹಾಗೂ ಇತರ 9 ಮಂದಿ ವಿರುದ್ಧ ಕೇಸ್ ಜಡಿದಿತ್ತು. ಸೆಪ್ಟೆಂಬರ್ 5, 2011 ರಂದು ಜನಾರ್ದನ ರೆಡ್ಡಿಯನ್ನು ಬಂಧಿಸಲಾಯಿತು. ಬಳಿಕ ಸಾಕ್ಷ್ಯ ನಾಶ ಮಾಡುವ ಶಂಕೆಯ ಮೇಲೆ ಕರ್ನಾಟಕದ ಬಳ್ಳಾರಿ, ಕಡಪ, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳಿಗೆ ಭೇಟಿ ನೀಡುವಂತಿಲ್ಲ ಎಂಬ ಷರತ್ತಿನೊಂದಿಗೆ ಸುಪ್ರೀಂಕೋರ್ಟ್ ಜನವರಿ 20, 2015 ರಂದು ಅವರಿಗೆ ಜಾಮೀನು ನೀಡಿತ್ತು.
ರೆಡ್ಡಿ ಮೇಲಿನ ಕೇಸ್ಗಳ ವಿಚಾರಣೆಯಲ್ಲಿ 12 ವರ್ಷಗಳ ವಿಳಂಬವಾಗಿದೆ. ಇದು ನಿಜಕ್ಕೂ ಕ್ಷಮಾರ್ಹವಲ್ಲ. ತನಿಖೆ ತ್ವರಿತಕ್ಕೆ ಈ ಹಿಂದೆಯೇ ಆದೇಶ ನೀಡಿದ್ದರೂ ವಿಳಂಬ ಮಾಡುತ್ತಿರುವುದೇಕೆ?. ವಿಚಾರಣೆ ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ವರದಿ ನೀಡಲು ತನಿಖಾಧಿಕಾರಿಗಳಿಗೆ ಕೋರ್ಟ್ ಸೂಚಿಸಿತು.
ಯಾವ ಕಾರಣಕ್ಕಾಗಿ ಮಾಜಿ ಸಚಿವರ ವಿರುದ್ಧದ ಕೇಸ್ ವಿಳಂಬವಾಗುತ್ತಿದೆ ಎಂಬುದನ್ನು ಮುಚ್ಚಿದ ಲಕೋಟೆಯಲ್ಲಿ ವರದಿ ನೀಡುವಂತೆ ಹೈದರಾಬಾದ್‌ನ ಸಿಬಿಐ ಕೋರ್ಟ್ ಆದೇಶಿಸಿತು. ಬಳಿಕ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 20ಕ್ಕೆ ಮುಂದೂಡಿದೆ.
ಜಾಮೀನು ರದ್ದಿಗೆ ಸಿಬಿಐ ಅರ್ಜಿ: ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಅವರಿಗೆ ನೀಡಿದ ಜಾಮೀನಿನ ಷರತ್ತುಗಳನ್ನು ಸಡಿಲ ಮಾಡಬೇಕು ಎಂದು 2020 ರಲ್ಲಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಕಳೆದ ವರ್ಷ ಆಗಸ್ಟ್ನಲ್ಲಿ ಜನಾರ್ದನ ರೆಡ್ಡಿ ಅವರು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡಿ ಬಳ್ಳಾರಿ, ಕಡಪ ಮತ್ತು ಅನಂತಪುರಕ್ಕೆ ಹೋಗಬಹುದು ಎಂದು ಸುಪ್ರೀಂ ಕೋರ್ಟ್ ತಿಳಿಸಿತ್ತು.
ಇದರಿಂದ ಆ ಜಿಲ್ಲೆಗಳಿಗೆ ರೆಡ್ಡಿ ಭೇಟಿ ನೀಡಿದ್ದು, ತನಿಖೆಗೆ ಅಡ್ಡಿಯಾಗುವ ಕಾರಣ ಅವರಿಗೆ ನೀಡಲಾದ ಜಾಮೀನು ರದ್ದುಗೊಳಿಸುವಂತೆ ಸಿಬಿಐ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಆರ್.ಷಾ ಮತ್ತು ನ್ಯಾಯಮೂರ್ತಿ ಕೃಷ್ಣ ಮುರಾರಿ ಅವರುಳ್ಳ ದ್ವಿಸದಸ್ಯ ಪೀಠ ಬುಧವಾರ ವಿಚಾರಣೆ ನಡೆಸಿತು.
ರೆಡ್ಡಿ ಬಳ್ಳಾರಿಯಲ್ಲಿದ್ದರೆ ಸಾಕ್ಷಿಗಳ ಜೀವಕ್ಕೆ ಬೆದರಿಕೆ: ಸಿಬಿಐ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಾಧವಿ ದಿವಾನ್ ಅವರು ವಾದ ಮಂಡಿಸಿ. ಗಾಲಿ ಜನಾರ್ದನ ರೆಡ್ಡಿ ಅವರ ಹುಟ್ಟೂರು ಬಳ್ಳಾರಿ. ಅವರು ಅಲ್ಲಿದ್ದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಾರೆ. ಅವರ ಜೀವಕ್ಕೆ ಬೆದರಿಕೆ ಹಾಕುವ ಸಾಧ್ಯತೆ ಇದೆ ಎಂದು ವಾದಿಸಿದರು. ಇದಕ್ಕೆ ಪೀಠ ಸಿಬಿಐ ಪ್ರಕರಣದ ತನಿಖೆ ಯಾವ ಹಂತದಲ್ಲಿದೆ ಎಂದಾಗ, ತನಿಖೆ ನಡೆಯುತ್ತಿಲ್ಲ ಎಂದು ಸಾಲಿಸಿಟರ್ ಜನರಲ್ ಉತ್ತರಿಸಿದರು.
ತನಿಖೆಗೆ ತಡೆಯಾಜ್ಞೆ ಇದೆಯೇ ಎಂದು ಪೀಠ ಕೇಳಿದಾಗ, ಸರಿಯಾದ ಉತ್ತರ ಸಿಗದಿದ್ದಕ್ಕೆ ಪೀಠ ಆಕ್ರೋಶ ವ್ಯಕ್ತಪಡಿಸಿತು. ಗಂಭೀರ ಆರೋಪದ ಪ್ರಕರಣ ದಾಖಲಾಗಿ 12 ವರ್ಷ ಕಳೆದರೂ ತನಿಖೆ ನಡೆಯದೇ ಇರುವುದು ದುರದೃಷ್ಟಕರ ಸಂಗತಿ. ಇದು ನ್ಯಾಯವನ್ನೇ ಅಪಹಾಸ್ಯ ಮಾಡಿದಂತಿದೆ. ಕಳೆದ ವರ್ಷದ ಆದೇಶದಂತೆಯೇ ತನಿಖೆಗೆ ಚುರುಕು ನೀಡಲು ನಿರ್ದೇಶಿಸಿತು.
ಅಲ್ಲದೇ, ತನಿಖೆ ಯಾವ ಕಾರಣಕ್ಕಾಗಿ ವಿಳಂಬವಾಗಿದೆ. ಯಾವ ಹಂತದಲ್ಲಿದೆ ಎಂಬುದವರ ವಿಸ್ತೃತ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಇದೇ 19 ರೊಳಗೆ ಕೋರ್ಟ್‌ಗೆ ನೀಡಬೇಕು ಎಂದು ಸೂಚಿಸಿದ ಪೀಠ, ಸಿಬಿಐ ಸಲ್ಲಿಸಿರುವ ಅಫಿಡವಿಟ್‌ಗೆ ಅರ್ಜಿದಾರರು ಮರು ಅರ್ಜಿ ಸಲ್ಲಿಸಬಹುದು ಎಂದು ಆದೇಶಿಸಿತು.
ಓದಿ: ನ್ಯಾಯಾಧೀಶರ ನಿವೃತ್ತಿ ವಯಸ್ಸು ಹೆಚ್ಚಿಸಲು ಬಾರ್ ಕೌನ್ಸಿಲ್ ಬೆಂಬಲ