ಪಾಟ್ನಾ : ಬಿಹಾರ ಮಾಜಿ ಮುಖ್ಯಮಂತ್ರಿ, ಹಿಂದೂಸ್ತಾನಿ ಅವಾಮ್ ಮೋರ್ಚಾ ಪಕ್ಷದ ಸಂಸ್ಥಾಪಕ ಜಿತನ್ ರಾಮ್ ಮಾಂಜಿ ಅವರು ಬ್ರಾಹ್ಮಣರ ಕುರಿತು ನೀಡಿರುವ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಇದು ಬಿಹಾರ ರಾಜಕೀಯದಲ್ಲಿ ಸಂಚಲನ ಉಂಟು ಮಾಡಿದ್ದು, ಆರೋಪ, ಪ್ರತ್ಯಾರೋಪಗಳಿಗೂ ಕಾರಣವಾಗಿದೆ.
ಮಾಜಿ ಸಿಎಂ ಮಾಂಜಿ ವಿರುದ್ಧ ವಿವಾದಾತ್ಮಕ ಹೇಳಿಕೆ ಆರೋಪ ಹಿನ್ನೆಲೆಯಲ್ಲಿ ಕೆಲವೆಡೆ ಎಫ್‌ಐಆರ್‌ಗಳು ದಾಖಲಾಗಿವೆ. ಈ ನಡುವೆ ಅಂತಾರಾಷ್ಟ್ರೀಯ ಹಿಂದೂ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಹಾಗೂ ಬಿಹಾರ ಬಿಜೆಪಿಯ ಕಾರ್ಯಕಾರಿ ಸದಸ್ಯ ಗಜೇಂದ್ರ ಝಾ ಜಿತನ್ ರಾಮ್ ಮಾಂಜಿ ಅವರ ನಾಲಿಗೆ ಕತ್ತರಿಸಿದವರಿಗೆ 11 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಜಿತನ್ ರಾಮ್ ಮಾಂಜಿ ಮಾನಸಿಕ ಅಸ್ವಸ್ಥ ಎಂದು ನಾವು ಆರಂಭದಲ್ಲಿ ನಂಬಿದ್ದೇವೆ. ಅವರು ಪ್ರಜ್ಞೆ ಕಳೆದುಕೊಂಡಿದ್ದಾರೆ. ಆದರೆ, ಪದೇಪದೆ ಬ್ರಾಹ್ಮಣರ ವಿರುದ್ಧ ಅವಹೇಳನ ಹಾಗೂ ನಿಂದನೀಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಹಿಂದೂ ಧರ್ಮದಲ್ಲಿ ಅವರಿಗೆ ನಂಬಿಕೆ ಇಲ್ಲ. ಹಿಂದೂ ಧರ್ಮವನ್ನು ಉಳಿಸುವ ಪ್ರಯತ್ನದಲ್ಲಿ ನಾನು ಸಾಯಲು ಸಿದ್ಧ ಎಂದು ಝಾ ಹೇಳಿದ್ದಾರೆ.
ಝಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಚ್‌ಎಎಂ ರಾಷ್ಟ್ರೀಯ ವಕ್ತಾರ ಡ್ಯಾನಿಶ್ ರಿಜ್ವಾನ್, ಮಾಂಜಿ ಅವರ ನಾಲಿಗೆ ಕತ್ತರಿಸುವ ಧೈರ್ಯ ಯಾರಿಗಿದೆ? ಬಿಜೆಪಿ ನಾಯಕತ್ವವು ತನ್ನ ನಾಯಕರನ್ನು ಹಿಡಿತಕ್ಕೆ ತೆಗೆದುಕೊಳ್ಳಬೇಕು. ಇಲ್ಲದಿದ್ರೆ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿರಬೇಕು. ಮಾಂಜಿ ಅವರು ಈಗಾಗಲೇ ಕ್ಷಮೆಯಾಚಿಸಿದ್ದಾರೆ. ವಿಷಯದ ಬಗ್ಗೆ ಈ ನಾಯಕರು ಏಕೆ ಇಂತಹ ಪ್ರಚೋದನೆಯನ್ನು ಸೃಷ್ಟಿಸುತ್ತಿದ್ದಾರೆ ಎಂದಿದ್ದಾರೆ.
ಇದೇ 19ರಂದು ತಮ್ಮ ಸಮಾಜದ ಕಾರ್ಯಕ್ರಮವೊಂದರಲ್ಲಿ ಮಾಂಜಿ ಅವರು ಬ್ರಾಹ್ಮಣರಿಗೆ 'ಹರಾಮಿ' ಎಂಬ ಪದವನ್ನು ಬಳಸಿದ್ದರು. ಇದಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಕ್ಷಮೆಯಾಚಿಸಿದ್ದರು.
ಇದನ್ನೂ ಓದಿ: ನನ್ನ ಮಕ್ಕಳ ಇನ್ಸ್ಟಾಗ್ರಾಂ ಹ್ಯಾಕ್ ಮಾಡಿದ್ದಾರೆ: ಕೇಂದ್ರದ ವಿರುದ್ಧ ಪ್ರಿಯಾಂಕಾ ಗಾಂಧಿ ಗಂಭೀರ ಆರೋಪ