ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ಅದೃಷ್ಟದ ಕ್ಷೇತ್ರವಾದ ವರುಣಾ ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ಸಿದ್ದರಾಮಯ್ಯ ಅವರು ಈಗ ಕೋಲಾರದತ್ತ ಮುಖ ಮಾಡಿದ್ದಾರೆ. ಆದರೆ, ಅಲ್ಲೂ ನೆಲೆಸಿಗುವ ಲಕ್ಷಣಗಳು ಇಲ್ಲದ ಕಾರಣ ಮತ್ತೆ ಅವರು ವರುಣಾದತ್ತ ಮುಖ ಮಾಡಲಿದ್ದಾರೆ ಎಂಬ ಗುಸುಗುಸು ರಾಜಕೀಯ ವಲಯದಲ್ಲಿ ಹರಡಿದೆ.
ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ನೀಡಿದ ಕ್ಷೇತ್ರ ಇದಾಗಿದ್ದು, ಇಲ್ಲಿಂದ ಸ್ಪರ್ಧಿಸುವ ಮುಂದಿನ ಹುರಿಯಾಳು ಯಾರೆಂಬ ಪ್ರಶ್ನೆಗೆ ಇನ್ನು ಸ್ಪಷ್ಟ ಉತ್ತರ ಸಿಕ್ಕಿಲ್ಲ. ಮೈಸೂರು, ನಂಜನಗೂಡು ಹಾಗೂ ನರಸೀಪುರ ತಾಲೂಕು ಸೇರಿ ನಗರ ಪ್ರದೇಶವನ್ನು ಹೊಂದಿಕೊಂಡಿರುವ ಕ್ಷೇತ್ರದಲ್ಲಿ ಲಿಂಗಾಯತ, ದಲಿತ, ಕುರುಬ ಮತಗಳೇ ನಿರ್ಣಾಯಕವಾಗಿವೆ.
ಸಿದ್ದರಾಮಯ್ಯರ ಅದೃಷ್ಟದ ಕ್ಷೇತ್ರ: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜಕೀಯ ತಿರುವು ನೀಡಿದ್ದು ಚಾಮುಂಡೇಶ್ವರಿ ಉಪಚುನಾವಣೆಯಾದರೂ, ಈ ಕ್ಷೇತ್ರಕ್ಕೂ ಅವರಿಗೂ ಅವಿನಾಭಾವ ಸಂಬಂಧವಿದೆ. ಅವರ ಹುಟ್ಟೂರು ಇಲ್ಲಿಯೇ ಇದ್ದರೆ, ಕುಟುಂಬದ ಹಿಡಿತದಲ್ಲಿರುವ ಕ್ಷೇತ್ರವಾಗಿದೆ. ಇದುವರೆಗೂ ನಡೆದ ಮೂರು ಚುನಾವಣೆಯಲ್ಲಿ ಎರಡು ಬಾರಿ ಸಿದ್ದರಾಮಯ್ಯ ಅವರು ಗೆದ್ದಿದ್ದರೆ, ಒಂದು ಬಾರಿ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಗೆಲುವು ಸಾಧಿಸಿದ್ದಾರೆ.
ಸಿದ್ದರಾಮಯ್ಯ ಅವರು ಮೊದಲ ಬಾರಿ ಗೆದ್ದಾಗ ವಿರೋಧ ಪಕ್ಷದ ನಾಯಕರಾದರೆ, ಎರಡನೇ ಬಾರಿಗೆ ಗೆದ್ದು ಸಿಎಂ ಹುದ್ದೇಗೇರಿದರು. ಹೀಗೆ ಅವರ ರಾಜಕೀಯ ಭವಿಷ್ಯವನ್ನೇ ಬದಲಿಸಿದ ಕ್ಷೇತ್ರ ಇದಾಗಿದೆ. ಇದೇ ಕಾರಣಕ್ಕಾಗಿ ವರುಣದಲ್ಲಿ ಅಭಿವೃದ್ಧಿ ಪರ್ವವನ್ನೇ ನಡೆಸಿ ಮನೆ ಮಾತಾಗಿದ್ದಾರೆ. ಆದರೆ, ಈ ಬಾರಿ ಪುತ್ರ ಯತೀಂದ್ರ ಅಥವಾ ತಾವೇ ಸ್ಪರ್ಧೆ ಮಾಡಬೇಕೆಂಬ ಪ್ರಶ್ನೆಗೆ ಇದುವರೆಗೂ ಉತ್ತರ ಸಿಕ್ಕಿಲ್ಲ. ಆದರೆ, ಕ್ಷೇತ್ರದಲ್ಲಿ ಪ್ರಬಲ ಸ್ಪರ್ಧಿಗಳಿಲ್ಲದ ಕಾರಣ ಅಪ್ಪ- ಮಗ ಹಿಡಿತ ಇಲ್ಲಿ ಬಿಗಿಯಾಗಿದೆ.
ಬಿಜೆಪಿ ಲೆಕ್ಕಾಚಾರವೇನು?: ಕಳೆದ ಬಾರಿಯ ಚುನಾವಣೆಯ ಕೊನೆ ಕ್ಷಣದವರೆಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಅವರು ಕಣಕ್ಕಿಳಿಯುತ್ತಾರೆಂಬ ಸುದ್ದಿ ಜೋರಾಗಿತ್ತು. ಆದರೆ, ಅದು ಕೊನೆಯಲ್ಲಿ ಸುಳ್ಳಾಯಿತು. ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಚುನಾವಣಾ ರಾಜಕೀಯದಿಂದ ನಿರ್ಗಮಿಸಿದ್ದು, ಅವರಿಂದ ತೆರವಾಗುವ ಶಿಕಾರಿಪುರ ಕ್ಷೇತ್ರದಲ್ಲಿ ಪುತ್ರ ವಿಜಯೇಂದ್ರ ಸ್ಪರ್ಧಿಸುವ ಸಾಧ್ಯತೆ ಇದೆ. ಇದರ ಮಧ್ಯೆಯೂ ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಅವರನ್ನು ಕಣಕ್ಕಿಳಿಸಿ ಮೈಸೂರು ಭಾಗದಲ್ಲಿ ಪಕ್ಷದ ಹವಾ ಹೆಚ್ಚಿಸುವ ಬಗ್ಗೆ ಬಿಜೆಪಿ ನಾಯಕರು ಚಿಂತನೆ ನಡೆಸುವ ಸಾಧ್ಯತೆಯೂ ಇದೆ.
ವರುಣಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಬಿಎಸ್ವೈ ಅಭಿಮಾನಿಗಳು ಇಂದಿಗೂ ವಿಜಯೇಂದ್ರ ಕಣಕ್ಕಿಳಿಯುವ ನಿರೀಕ್ಷೆಯಲ್ಲಿದ್ದಾರೆ. ಯಡಿಯೂರಪ್ಪ ಅವರ ಸೂಚನೆಗಾಗಿ ಕಾಯುತ್ತಿದ್ದಾರೆ. ಇದರಿಂದಾಚೆಗೂ ವಿಜಯೇಂದ್ರ ಬಾರದಿದ್ದರೆ ಬಿಜೆಪಿಯಿಂದ ಸ್ಪರ್ಧೆಗಿಳಿಯಲು ಆಕಾಂಕ್ಷಿಗಳ ದಂಡೇ ಇದೆ. ಆದರೆ, ಅವರ ಗೆಲುವು ಕಷ್ಟಸಾಧ್ಯ ಎನ್ನಲಾಗುತ್ತಿದೆ. ಕಳೆದ ಬಾರಿ ಸ್ಪರ್ಧೆಗಿಳಿದಿದ್ದ ಬಿಜೆಪಿ ಕಾರ್ಯಕರ್ತ ತೋಟಂದಪ್ಪ ಬಸವರಾಜ್, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದಿಶ್ ಹಂಚ್ಯಾ, ಕಾಪು ಸಿದ್ದಲಿಂಗಸ್ವಾಮಿ, ವರುಣಾ ಮಹದೇವಸ್ವಾಮಿ ಈ ಬಾರಿಯೂ ಬಿಜೆಪಿಯ ಆಕಾಂಕ್ಷಿಗಳಾಗಿದ್ದಾರೆ.
ಕ್ಷೇತ್ರದಲ್ಲಿ ಜೆಡಿಎಸ್ ಹೇಗಿದೆ?: ಇಲ್ಲಿ ಜೆಡಿಎಸ್ ಅಷ್ಟಾಗಿ ಪ್ರಾಬಲ್ಯ ಇಲ್ಲದಿದ್ದರೂ ಅಭಿಷೇಕ್ ಎಂಬುವರರನ್ನು ಕಣಕ್ಕಿಳಿಸಲಿದೆ. ಕಳೆದ ಬಾರಿ ಚುನಾವಣೆಯಲ್ಲಿ ಕಾಣಿಸಿಕೊಂಡಿದ್ದ ಅಭಿಷೇಕ್ ಇದುವರೆವಿಗೂ ಕ್ಷೇತ್ರದ ಕಡೆಗೆ ಮುಖಮಾಡಿಲ್ಲ. ಹೀಗಾಗಿ ಜೆಡಿಎಸ್‌ನಿಂದ ಸ್ಥಳೀಯರೊಬ್ಬರು ಕಣಕ್ಕಿಳಿಯಬಹುದು. ಆದರೆ, ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿಗೆ ತನ್ನ ಬಾಹ್ಯ ಬೆಂಬಲವನ್ನು ಜೆಡಿಎಸ್ ನೀಡಲಿದೆ ಎಂಬುದು ರಾಜಕೀಯ ಚದುರಂಗ ಆಟದಲ್ಲಿ ಈವರೆಗೂ ಕಂಡುಬಂದಿದೆ.
ಮತದಾರರ ಮಾಹಿತಿ: ವರುಣಾ ಕ್ಷೇತ್ರದಲ್ಲಿ ಒಟ್ಟು 221050 ಮತದಾರರಿದ್ದಾರೆ. ಇದರಲ್ಲಿ 111980 ಮಂದಿ ಪುರುಷರು, 109052 ಮಂದಿ ಮಹಿಳೆಯರಿದ್ದರೆ, 13 ಇತರೆ ಇದ್ದಾರೆ. 2008, 2012 ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಗೆದ್ದಿದ್ದರೆ, 2018 ರ ಚುನಾವಣೆಯಲ್ಲಿ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಜಯಿಸಿದ್ದಾರೆ.
ಇದನ್ನೂ ಓದಿ: ಟಿಕೆಟ್ ಕೊಡಲು ಸಿದ್ದವಿದ್ರೂ ಚಿಂಚನಸೂರ್ ಪಕ್ಷ ಬಿಟ್ರು: ಬಿ.ಎಸ್.ಯಡಿಯೂರಪ್ಪ