ಬೆಂಗಳೂರು: ವಿವಿಧ ಇಲಾಖೆಗಳ ಟೆಂಡರ್ಗಳನ್ನು ರದ್ದುಗೊಳಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮೂಲಕ ಚುನಾವಣಾ ಆಯೋಗಕ್ಕೆ ಮನವಿ ಪತ್ರ ಸಲ್ಲಿಸಿದ್ದಾರೆ.
ಮನವಿ ಪತ್ರದಲ್ಲಿ ಏನಿದೆ? ಚುನಾವಣೆ ಘೋಷಣೆಯ ಆರು ತಿಂಗಳ ಹಿಂದೆ ಸರ್ಕಾರ ಕೈಗೊಂಡಿರುವ ತೀರ್ಮಾನಗಳ ಬಗ್ಗೆ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿವಿಧ ಇಲಾಖೆಯ ಯೋಜನೆಗಳ ಸಂಬಂಧ 20 ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ಟೆಂಡರ್ ಆದೇಶ ಹೊರಡಿಸಿದೆ. ಸಫಲ ಬಿಡ್ಡರ್ಗಳಿಂದ ಶೇ 40 ಕಮಿಷನ್ ಸಂಗ್ರಹಿಸಲು ಇಲಾಖೆಗಳು ಹಲವು ಟೆಂಡರ್ಗಳನ್ನು ಕರೆದಿದ್ದಾರೆ. ಆ ಹಣವನ್ನು ಮುಂಬರುವ ಚುನಾವಣೆಗೆ ಬಳಸಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಪತ್ರದಲ್ಲಿ ಗಂಭೀರ ಆರೋಪ ಮಾಡಿದೆ.
ಬಿಜೆಪಿ ಸರ್ಕಾರದ ವಿರುದ್ಧ ಗಂಭೀರ ಆರೋಪ: ಶಿರಾಡಿ ಘಾಟ್ ರಸ್ತೆ ಯೋಜನೆ 1,976 ಕೋಟಿ ರೂ., ಓಬಳಾಪುರ- ಸೋಮಕ್ಕನ ಮಠ ರಸ್ತೆ ಯೋಜನೆ 1,682 ಕೋಟಿ ರೂ., ರಾಯಚೂರು ವಿಭಾಗದ ಯೋಜನೆ 1,633 ಕೋಟಿ, ಹಾಸನ ಚತುಷ್ಪಥ 1,318 ಕೋಟಿ, ಬೈಪಾಸ್ ಕಾಮಗಾರಿಗಳಿಗೆ 1,167 ಕೋಟಿ, ಬೆಳಗಾವಿ ಹುನಗುಂದ ರಸ್ತೆ ಕಾಮಗಾರಿ 1,044 ಕೋಟಿ, ಹೊಸಪೇಟೆ-ಬಳ್ಳಾರಿ ರಸ್ತೆ ಯೋಜನೆ 1,015 ಕೋಟಿ, ವಸತಿ ಯೋಜನೆಗಳು 972 ಕೋಟಿ ರೂ., ಸೋಮಕ್ಕನಮಠ ಕುಣಿಗಲ್ ರಸ್ತೆ ಯೋಜನೆ 968 ಕೋಟಿ, ಇತರೆ ಸಿವಿಲ್ ಕಾಮಗಾರಿಗಳಿಗೆ 1,000 ಕೋಟಿ ರೂ., ಇತರೆ ಕಾಮಗಾರಿಗಳಿಗೆ 1,500 ಕೋಟಿ ರೂ. ಸೇರಿದಂತೆ ಕೆಲ ಟೆಂಡರ್ಗಳನ್ನು ರದ್ದುಗೊಳಿಸುವಂತೆ ಕೋರಿದ್ದಾರೆ.
ಈಗಾಗಾಲೇ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ವಿವಿಧ ಇಲಾಖೆಗಳ ಬಿಲ್ ಪಾವತಿಸಲು ಶೇ 40ರಷ್ಟು ಕಮಿಷನ್ ಕೇಳುತ್ತಿರುವ ಬಗ್ಗೆ ಪ್ರಧಾನಿ ಮತ್ತು ಸಿಎಂಗೆ ಪತ್ರ ಬರೆದು ದೂರು ನೀಡಿದ್ದಾರೆ. ಆದರೆ, ಈ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕಾರಣ ಕೆಲ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕರ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿ, 8 ಕೋಟಿ ರೂ. ಜಪ್ತಿ ಮಾಡಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ನೀಡಿದ ದೂರಿನಲ್ಲಿ ಗಂಭೀರ ಆರೋಪ: ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆ ಒಂದು ವೇಳೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ 20 ಸಾವಿರ ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳಿಗಾಗಿ ಟೆಂಡರ್ ಕರೆಯಲು ಅನುವು ಮಾಡಿಕೊಟ್ಟರೆ, ಆಡಳಿತಾರೂಢ ಪಕ್ಷದ ಶಾಸಕರು, ಸಂಸದರು ಶೇ 40ಗಿಂತಲೂ ಅಧಿಕ ಮೊತ್ತದ ಕಿಕ್ ಬ್ಯಾಕ್ ಸಂಗ್ರಹಿಸಲಿದ್ದಾರೆ. ಈ ಕಿಕ್ ಬ್ಯಾಕ್ ಹಣವನ್ನು ಮುಂಬರುವ ಚುನಾವಣಾ ಅಕ್ರಮಗಳಿಗೆ ಬಳಸಲಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನೀತಿ ಸಂಹಿತೆ ಜಾರಿಯಾದ ಬಳಿಕ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳು, ಸಚಿವರು, ಶಾಸಕರು, ಸಂಸದರು ಹಿಂದಿನ ದಿನಾಂಕ ಹಾಕಿ ಟೆಂಡರ್ ಕರೆದು, ಅವರಿಂದ ಕಿಕ್ ಬ್ಯಾಕ್ ಪಡೆಯುತ್ತಿದ್ದಾರೆ. ಈ ಹಿನ್ನೆಲೆ ಸರ್ಕಾರದ ಈ ನಡೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯಯಿದೆ. ಹೀಗಾಗಿ ಮುಕ್ತ ಹಾಗೂ ಪಾರದರ್ಶಕ ಚುನಾವಣೆಗಾಗಿ ಇತ್ತೀಚೆಗೆ ಹೊರಡಿಸಲಾದ ಟೆಂಡರ್ಗಳನ್ನು ರದ್ದುಗೊಳಿಸುವಂತೆ ಕೋರಿದ್ದಾರೆ.
ಅಧಿಕಾರಿಗಳನ್ನು ವರ್ಗಾಯಿಸಿ: ಮನವಿ ಪತ್ರದಲ್ಲಿ ಮೂರು ವರ್ಷಗಿಂತಲೂ ಅಧಿಕ ವರ್ಷ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ವರ್ಗಾಯಿಸುವಂತೆ ಕೋರಿದ್ದಾರೆ. ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ರಾಘವೇಂದ್ರ, ಜ್ಞಾನೇಶ್, ಪ್ರಾಣೇಶ್ ಮತ್ತು ಯೋಗೇಶ್ ಎಂಬುವರು ಕಳೆದ 9, 5 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈ ಅಧಿಕಾರಿಗಳು ಬಿಜೆಪಿ ಹಾಗೂ ಆರ್ಎಸ್ಎಸ್ಗೆ ನಿಕಟ ಸಂಬಂಧ ಹೊಂದಿದ್ದಾರೆ. ಅವರ ಪೂರ್ವಗ್ರಹ ಪೀಡಿತ ಕ್ರಮಗಳು ಮುಕ್ತ ಹಾಗೂ ಪಾರದರ್ಶಕ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಮತದಾರರ ಮಾಹಿತಿ ಕಳ್ಳತನ ಆರೋಪಕ್ಕೆ ಒಳಗಾದ ಚಿಲುಮೆ ಸಂಸ್ಥೆ ಜೊತೆ ಮತ ಪರಿಷ್ಕರಣೆ ಕಾರ್ಯದಲ್ಲಿ ಈ ಅಧಿಕಾರಿಗಳ ನಡವಳಿಕೆ ಅನುಮಾನಾಸ್ಪದವಾಗಿತ್ತು. ಈ ಸಂಬಂಧ ಈಗಾಗಲೇ ಚುನಾವಣಾ ಆಯೋಗದ ಸಭೆ ವೇಳೆ ಉಲ್ಲೇಖಿಸಿದ್ದೇವೆ. ಹೀಗಾಗಿ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಅಧಿಕಾರಿಗಳನ್ನು ತಕ್ಷಣ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ಅವರ ಮಾತೃ ಇಲಾಖೆಗಳಿಗೆ ವರ್ಗಾವಣೆ ಮಾಡಬೇಕು ಎಂದು ಕೋರಿದ್ದಾರೆ.
ಇದನ್ನೂ ಓದಿ: ಅಭ್ಯರ್ಥಿಗಳ ಆಯ್ಕೆಗೂ ಚುನಾವಣೆ ನಡೆಸಿದ ಬಿಜೆಪಿ: ಬ್ಯಾಲೆಟ್ ಬಾಕ್ಸ್ ಸೇರಿದ ಆಕಾಂಕ್ಷಿಗಳ ಹಣೆಬರಹ..!