ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಮತಬೇಟೆ ನಡೆಸುತ್ತಿದ್ದಾರೆ. ತಾಲೂಕಿನ ದೇವಮೂಲೆ ದಳಸೆಗೆರೆ ಗ್ರಾಮದ ವಿನಾಯಕ ಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ಪ್ರಚಾರ ಕಾರ್ಯಕ್ಕೆ ಅವರು ಧುಮುಕಿದ್ದಾರೆ. ಕಳೆದೆರಡು ದಿನಗಳ ಹಿಂದೆ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಶರತ್ ಬಚ್ಚೇಗೌಡ ಇದೇ ದಳಸಗೆರೆ ಗ್ರಾಮದಿಂದ ಪ್ರಚಾರ ಆರಂಭಿಸಿದ್ದರು.
ಬೃಹತ್ ಸೇಬು ಹಣ್ಣಿನ ಹಾರ ಹಾಕಿ ಎಂಟಿಬಿಗೆ ಸ್ವಾಗತ: ಗ್ರಾಮದಲ್ಲಿ ಕ್ರೇನ್ ಮೂಲಕ ಬೃಹತ್ ಸೇಬು ಹಾಗೂ ಬಾಳೆ ಹಣ್ಣಿನ ಹಾರ ಹಾಕಿ ಎಂಟಿಬಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಎಂಟಿಬಿ, ''ನಾಗಲೋಕ ಎಲ್ಲಿ ಗುಳ್ಳೆ ನರಿ ಎಲ್ಲಿ, ನಾಗಲೋಕಕ್ಕೆ ಗುಳ್ಳೆನರಿ ಹೋಲಿಕೆ ಮಾಡಲು ಸಾಧ್ಯವೇ'' ಎಂದರು. ಹೊಸಕೋಟೆಯಲ್ಲಿ ನರೇಂದ್ರ ಮೋದಿ ಅಥವಾ ಸಿಎಂ ಬಂದು ನಿಂತ್ರೂ ಗೆಲ್ಲುವುದು ಕಾಂಗ್ರೆಸ್ ಎಂದು ಶರತ್ ನೀಡಿದ್ದ ಹೇಳಿಕೆಗೆ ಅವರು ಈ ರೀತಿ ಟಾಂಗ್ ಕೊಟ್ಟರು. ಸಚಿವ ಎಂಟಿಬಿ ಅವರು, ಶರತ್ ಅವರನ್ನು ಗುಳ್ಳೆನರಿಗೆ ಹೋಲಿಸಿದರು. ಜೊತೆಗೆ ಪ್ರಧಾನಿ ಮೋದಿ 130 ಕೋಟಿ ಜನ ಮೆಚ್ಚಿದ ನಾಯಕ. ನಾನೊಬ್ಬ ಜನಪ್ರತಿನಿಧಿ ಅನ್ನೋದು ತಿಳಿದಿದ್ದರೆ ಅವರು ಈ ಮಾತು ಹೇಳ್ತಿರಲಿಲ್ಲ. ಇದಕ್ಕೆಲ್ಲ ಈ ಬಾರಿಯ ಚುನಾವಣೆಯಲ್ಲಿ ಜನರು ಬುದ್ಧಿ ಕಲಿಸುತ್ತಾರೆ'' ಎಂದರು.
ಇದನ್ನೂ ಓದಿ: ಕಮಲ ತೊರೆದು ಕೈ ಹಿಡಿದ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ
ರಾಜಕೀಯ ನಿವೃತ್ತಿ ಬಗ್ಗೆ ಮಾತು..: ಆರು ತಿಂಗಳ ಹಿಂದೆಯೇ ರಾಜಕೀಯ ನಿವೃತ್ತಿ ನಿರ್ಧಾರ ತೆಗೆದುಕೊಂಡಿದ್ದೆ. ಈಗಾಗಲೇ ಆರು ಚುನಾವಣೆಗಳನ್ನು ಎದುರಿಸಿದ್ದೇನೆ. ನನ್ನನ್ನು ಎಂಎಲ್ಎ, ಮಂತ್ರಿ, ಎಂಎಲ್ಸಿಯಾಗಿ ನೀವು ಮಾಡಿದ್ದೀರಿ. 19 ವರ್ಷಗಳಿಂದ ಹೊಸಕೋಟೆ ಮತದಾರರ ಜೊತೆ ಪ್ರೀತಿ ವಿಶ್ವಾಸದಿಂದ ಕಳೆದಿದ್ದೇನೆ. ಹೈಕಮಾಂಡ್ಗೆ ಸಹ ನಾನು ರಾಜಕೀಯ ನಿವೃತ್ತಿ ಬಗ್ಗೆ ಹೇಳಿದ್ದೆ. ಇದಕ್ಕೆ ರಾಜ್ಯ ನಾಯಕರು ಒಪ್ಪಿದ್ರು, ಆದ್ರೆ ಕೇಂದ್ರ ನಾಯಕರು ಈ ಬಾರಿ ನಿಲ್ಲಿ ಎಂದರು.
ಮಗನಿಗೆ ಟಿಕೆಟ್ ಸಿಗದೇ ಇರುವ ಬಗ್ಗೆ ಸ್ಪಷ್ಟನೆ ನೀಡಿದರು. ಜೊತೆಗೆ ನಿತೀಶ್ಗೆ ಮತ್ತೊಮ್ಮೆ ಒಳ್ಳೆ ಅವಕಾಶ ನೀಡೋಣ ಅಂತ ಹೇಳಿದ್ದಾರೆ. ಹೀಗಾಗಿ ನಾನು ಚುನಾವಣೆಗೆ ನಿಂತಿದ್ದೇನೆ. ಇದೇ ನನ್ನ ಕೊನೆಯ ಚುನಾವಣೆ ಎಂದು ಎಂಟಿಬಿ ಘೋಷಣೆ ಮಾಡಿದರು. ಅಲ್ಲದೇ ಮುಂದೆ ಅರ್ಧದಲ್ಲಿ ಚುನಾವಣೆ ಬಂದ್ರೂ, ಯಾವಾಗ ಚುನಾವಣೆ ಬಂದ್ರೂ ನಿತೀಶ್ ಪುರುಷೋತ್ತಮ್ ಅಭ್ಯರ್ಥಿಯಾಗ್ತಾರೆ ಎಂದು ತಮ್ಮ ಮಗನಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಪಕ್ಕಾ ಎಂದು ತಿಳಿಸಿದರು.
ಇದನ್ನೂ ಓದಿ: ಡಾ.ಜಿ.ಪರಮೇಶ್ವರ್ ಕಾಲುಮುಟ್ಟಿ ಆಶೀರ್ವಾದ ಪಡೆದ ಬಿ.ವೈ.ವಿಜಯೇಂದ್ರ- ವಿಡಿಯೋ