ಬೆಂಗಳೂರು: ಟಿಕೆಟ್ ಕೈ ತಪ್ಪಿದ್ದರಿಂದ ಬಿಜೆಪಿಯಿಂದ ಒಂದು ಹೆಜ್ಜೆ ಹೊರಗಿಟ್ಟಿರುವ ಲಕ್ಷ್ಮಣ ಸವದಿ ಇಂದು ಬಿಜೆಪಿಗೆ ಮತ್ತು ತಮ್ಮ ಪರಿಷತ್ ಸ್ಥಾನಕ್ಕೆ ಇಂದು ಸಂಜೆ ರಾಜೀನಾಮೆ ಸಲ್ಲಿಸಲಿದ್ದಾರೆ. ಬಿಜೆಪಿ ಪಕ್ಷದ ವಿರುದ್ಧ ಬಂಡಾಯ ಎದ್ದಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ರಾಜೀನಾಮೆ ಪತ್ರ ಹಿಡಿದು ಬೆಂಗಳೂರಿಗೆ ವಿಮಾನ ಪ್ರಯಾಣ ಬೆಳೆಸಿದರು. ಶುಕ್ರವಾರ ಬೆಳಗ್ಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಲಕ್ಷ್ಮಣ ಸವದಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ, ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಕೂಡ ಸಾಥ್ ನೀಡಿರುವುದು ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಲಕ್ಷ್ಮಣ ಸವದಿ, ಬೆಂಗಳೂರಿಗೆ ಹೋಗಿ ಸಾಧಕ, ಬಾಧಕ ಚರ್ಚೆ ಮಾಡುತ್ತೇನೆ. ಇದಾದ ಮೇಲೆ ಒಂದು ನಿರ್ಣಯ ಕೈಗೊಳ್ಳುತ್ತೇನೆ. ವಿಧಾನ ಪರಿಷತ್ ಸ್ಥಾನ ಮತ್ತು ಪಕ್ಷಕ್ಕೆ ರಾಜೀನಾಮೆ ಕೊಡಬೇಕು. ಇನ್ನೂ ಹಂಗಿನಲ್ಲಿ ಇದ್ದೇನೆ, ಅದರಿಂದ ಹೊರಬರಬೇಕು. ಬಳಿಕ ಏನು ಮಾಡಬೇಕು ಎನ್ನುವ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದರು.
ಕಾಂಗ್ರೆಸ್, ಜೆಡಿಎಸ್ನಿಂದ ಆಹ್ವಾನ ಇದೆ. ಸಂಜೆಯ ವರಗೆ ಒಂದು ತೀರ್ಮಾನಕ್ಕೆ ಬರ್ತಿನಿ. ಏಪ್ರಿಲ್ 17 ಇಲ್ಲವೇ 18 ರಂದು ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಕ್ಷೇತ್ರದ ಜನರ ಒಪ್ಪಿಗೆ ಪಡೆದಿದ್ದೇನೆ. ಖಾಸಗಿಯಾಗಿಯೂ ಅನೇಕರು ತಮ್ಮ ನಿರ್ಧಾರವನ್ನು ಹೇಳಿದ್ದಾರೆ. ಮನೆ ಬಿಟ್ಟು ಹೊರಗೆ ಬಂದ ಮೇಲೆ ಸಂಪರ್ಕ ಮಾಡಿದರೇನು, ಬಿಟ್ಟರೇನು ಎಂದು ಹೈಕಮಾಂಡ್ ಸಂಪರ್ಕದ ಬಗ್ಗೆ ಪ್ರತಿಕ್ರಿಯೆ ನೀಡಿದರು.
ನನ್ನ ಸಂಪರ್ಕಕ್ಕೆ ಬಿ.ಎಲ್.ಸಂತೋಷ ಬಹಳ ಪ್ರಯತ್ನ ಪಟ್ಟರು. ಕೆಲ ಮುಖಂಡರನ್ನೂ ಸಹ ಕಳಿಸಿದರು. ಆಜ್ಞೆಯನ್ನು ಪಾಲಿಸುವುದು ಕಷ್ಟ, ಬಿಡುವುದು ಕಷ್ಟ. ಬಿ.ಎಲ್.ಸಂತೋಷ ನನ್ನ ಗುರು, ನನ್ನನ್ನು ಕ್ಷಮಿಸಿ ಎಂದು ಹೇಳುತ್ತೇನೆ. ಅವರಿಂದ ಯಾವುದೇ ಅನ್ಯಾಯ ಆಗಿಲ್ಲ, ಕಷ್ಟ ಕಾಲದಲ್ಲಿ ನೆರವು ಕೊಟ್ಟಿದ್ದಾರೆ ಎಂದು ಸವದಿ ಹೇಳಿದರು. ಅಥಣಿ ಕೆಲ ಪ್ರದೇಶ ನೀರಾವರಿಯಿಂದ ವಂಚಿತಗೊಂಡಿದೆ. ನೀರಾವರಿ ಸೌಲಭ್ಯ ಕಲ್ಪಿಸಬೇಕು ಎನ್ನುವುದು ನನ್ನ ಆಸೆ. ವೈಯಕ್ತಿಕ ಬೇಡಿಕೆ ಅಲ್ಲ, ನೀರಾವರಿ ಬೇಡಿಕೆ ಇಡುತ್ತೇನೆ ಎಂದರು.
ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಬಸವರಾಜ ಹೊರಟ್ಟಿ ಅವರ ಬಳಿ ಸವದಿ ಸಮಯ ಕೇಳಿದ್ದರು. ಇಂದು ಅಂಬೇಡ್ಕರ್ ಜಯಂತಿ, ಸರ್ಕಾರಿ ರಜೆ ಇದೆ. ಇತ್ತ ಸಭಾಪತಿ ಬಸವರಾಜ ಹೊರಟ್ಟಿ ಸದ್ಯ ಮೈಸೂರಿನಲ್ಲಿದ್ದಾರೆ. ಹೀಗಾಗಿ ಸಂಜೆ 6 ಗಂಟೆಗೆ ಹೊರಟ್ಟಿ ಸಮಯ ನಿಗದಿಪಡಿಸಿದ್ದಾರೆ. ಇಂದು ಸಂಜೆ 6 ಗಂಟೆಗೆ ಸರ್ಕಾರಿ ನಿವಾಸಕ್ಕೆ ಬನ್ನಿ ಎಂದು ಸವದಿಗೆ ಹೊರಟ್ಟಿ ತಿಳಿಸಿದ್ದಾರೆ. ಹೀಗಾಗಿ, ಇಂದು ಸಂಜೆ ಮೊದಲು ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಸವದಿ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ.
ಕಾಂಗ್ರೆಸ್ನತ್ತ ಸವದಿ?: ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರುವ ಸಾಧ್ಯತೆ ಹೆಚ್ಚಿದೆ. ಇತ್ತ ಜೆಡಿಎಸ್ ಕೂಡ ಸವದಿಯವರನ್ನು ಪಕ್ಷಕ್ಕೆ ಕರೆತರಲು ಯತ್ನಿಸುತ್ತಿದೆ. ಲಕ್ಷ್ಮಣ ಸವದಿ ಮುಂದಿನ ನಡೆ ಏನು ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಆದರೆ, ಇಂದು ಬೆಳಗ್ಗೆ ಕಾಂಗ್ರೆಸ್ ಶಾಸಕ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಮತ್ತು ವಿಧಾನ ಪರಿಷತ್ ಸದಸ್ಯ ಚೆನ್ನರಾಜ್ ಹಟ್ಟಿಹೊಳಿ ಜೊತೆಗೆ ಲಕ್ಷ್ಮಣ ಸವದಿ ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ತೆರಳಿದ್ದಾರೆ. ಲಕ್ಷ್ಮಣ ಸವದಿ ಮತ್ತು ಚನ್ನರಾಜ್ ಹಟ್ಟಿಹೊಳಿ ಬೆಳಗಾವಿ ವಿಮಾನದಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವುದು ಅನುಮಾನಗಳಿಗೆ ಪುಷ್ಠಿ ನೀಡಿದೆ.
ಇದನ್ನೂ ಓದಿ: ಸಿದ್ಧರಾಮಯ್ಯ ಸಲಹೆಯಿಂದ ನಾನು ವಿಧಾನಪರಿಷತ್ ಸ್ಥಾನಕ್ಕೆ ಆಯ್ಕೆಯಾದೆ: ಲಕ್ಷ್ಮಣ್ ಸವದಿ
ಬಿಜೆಪಿ ಹೈಕಮಾಂಡ್ ಶಾಸಕ ಮಹೇಶ ಕುಮಟಳ್ಳಿ ಅವರಿಗೆ ಅಥಣಿ ಕ್ಷೇತ್ರದ ಟಿಕೆಟ್ ನೀಡಿದೆ. ಇದರಿಂದ ಅಥಣಿ ಆಕಾಂಕ್ಷಿ ಅಭ್ಯರ್ಥಿಯಾಗಿದ್ದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಸಮಾಧಾನಗೊಂಡಿದ್ದರು. ಅಂತೆಯೇ ಬೆಂಬಲಿಗರ ಜೊತೆ ಸಭೆ ನಡೆಸಿ, ಎಂಎಲ್ಸಿ ಮತ್ತು ಬಿಜೆಪಿಗೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದಾರೆ. ಶುಕ್ರವಾರ ಸಂಜೆ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬಳಿಕ ಪಕ್ಷಕ್ಕೆ ಗುಡ್ ಬೈ ಹೇಳುವುದಾಗಿ ಲಕ್ಷ್ಮಣ ಸವದಿ ನಿನ್ನೆ ತಿಳಿಸಿದ್ದರು.
ಇದನ್ನೂ ಓದಿ: ಅಸಮಾಧಾನಿತರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಸರಿಪಡಿಸುತ್ತೇವೆ: ಯಡಿಯೂರಪ್ಪ
ರಾಜಕೀಯವಾಗಿ ಸಂಕಷ್ಟದಲ್ಲಿದ್ದೇನೆ. ಈ ಬಾರಿ ಅವಕಾಶ ಮಾಡಿಕೊಡಿ ನನಗೆ. ಕಾಂಗ್ರೆಸ್, ಜೆಡಿಎಸ್ ಪಕ್ಷದವರು ನನ್ನನ್ನು ಸಂಪರ್ಕಿಸುತ್ತಿದ್ದಾರೆ. ಯಾವ ಪಕ್ಷ ಸೇರ್ಪಡೆ ಆಗಬೇಕು ಎಂದು ನಿಮ್ಮ ಅಭಿಪ್ರಾಯದ ಮೇಲೆ ನಿಂತಿದೆ. ಬಿಜೆಪಿ ಪಕ್ಷವನ್ನು ಬಿಡುತ್ತೇನೆ ಎಂದು ಗುರುವಾರ ಬೆಂಬಲಿಗರ ಸಭೆಯಲ್ಲಿ ಸವದಿ ತಿಳಿಸಿದ್ದರು.
ಪಕ್ಷದಲ್ಲಿನ ಮಾನಸಿಕ ಹಿಂಸೆ, ಅವಮಾನ ಸಹಿಸಿಕೊಂಡು ಹಲವು ದಿನದಿಂದ ಬಿಜೆಪಿ ಪಕ್ಷದಲ್ಲಿದ್ದೆ. ಆದರೆ, ನಾನು ನಂಬಿದ ತಾಯಿ ಬಿಜೆಪಿ ಬೇರೆಯವರಿಗೆ ಆದ್ಯತೆ ನೀಡಿದ್ದು ಬೇಸರ ಮೂಡಿಸಿದೆ. ಇದರಿಂದ ಪಕ್ಷದಿಂದ ಹೊರಗೆ ಬರುತ್ತಿದ್ದೇನೆ ಎಂದು ಬಿಜೆಪಿಗೆ ರಾಜೀನಾಮೆ ನೀಡುವ ಬಗ್ಗೆ ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದ್ದರು.