ರಾಮನಗರ: ಕನಕಪುರ ವಿಧಾನಸಭಾ ಮತಕ್ಷೇತ್ರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಭದ್ರಕೋಟೆ. ಹಲವು ವರ್ಷಗಳಿಂದ ವಿರೋಧಿಗಳಿಲ್ಲದೇ ಪಾರುಪತ್ಯ ಮೆರೆದಿರುವ ಏಕಮೇವ ಕ್ಷೇತ್ರವಿದು. ಸದ್ಯ ಮುಖ್ಯಮಂತ್ರಿ ರೇಸ್ನಲ್ಲಿರುವ ಡಿಕೆ ಶಿವಕುಮಾರ್, ಅತಿ ಹೆಚ್ಚು ಬಹುಮತದಿಂದ ಗೆಲ್ಲುವ ತವಕದಲ್ಲಿದ್ದಾರೆ. ಪ್ರತಿಸ್ಪರ್ಧಿ ಜೆಡಿಎಸ್ಗೆ ತನ್ನದೇಯಾದ ಮತಗಳಿದ್ದರೂ ಸೂಕ್ತ ಅಭ್ಯರ್ಥಿ ಇಲ್ಲ. ಬಿಜೆಪಿ ಬಲಾಬಲಾಕ್ಕೆ ಹೋರಾಡುತ್ತಿದ್ದು ಅಸ್ತಿತ್ವಕ್ಕಾಗಿ ಹುಡುಕಾಡುತ್ತಿದೆ. ಹಾಗಾಗಿ ಕ್ಷೇತ್ರದಲ್ಲಿ ಹೆಚ್ಚು-ಕಡಿಮೆ ಕಾಂಗ್ರೆಸ್ನ ಪ್ರಾಬಲ್ಯವಿದೆ. ಆದರೂ, ಈ ಬಾರಿ ಡಿಕೆ ಶಿವಕುಮಾರ್ ಗೆಲುವು ಅಂದಕೊಂಡಷ್ಟು ಸುಲಭವಲ್ಲ ಎನ್ನುತ್ತಿದ್ದಾರೆ ರಾಜಕೀಯ ವಿಶ್ಲೇಷಕರು.
ಎದುರಾಳಿಗಳ ಕೊರತೆ: ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಕ್ಷೇತ್ರದಲ್ಲಿ ಪ್ರಬಲ ನಾಯಕರಾಗಿದ್ದರಿಂದ ಅವರೇ ಹುರಿಯಾಳು. ಅವರಿಗೆ ತೀವ್ರ ಪೈಪೋಟಿ ನೀಡಲು ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಯನ್ನು ಘೋಷಣೆ ಮಾಡದೇ ಕಾದು ನೋಡುವ ತಂತ್ರ ರೂಪಿಸಿವೆ. ಆಪ್ ಪಕ್ಷದಿಂದ ಪುಟ್ಟರಾಜು ಗೌಡ ಕಣಕ್ಕಿಳಿಯಲಿದ್ದಾರೆ. ಒಕ್ಕಲಿಗರ ಮತಗಳೇ ಕ್ಷೇತ್ರದಲ್ಲಿ ನಿರ್ಣಾಯಕ. ಡಿಕೆ ಶಿವಕುಮಾರ್ ಕ್ಷೇತ್ರದಿಂದ ಗೆದ್ದು ಹಲವು ಬಾರಿ ಮಂತ್ರಿ ಕೂಡ ಆಗಿದ್ದಾರೆ.
ಒಟ್ಟು 7 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಡಿಕೆಶಿ, ಕನಕಪುರ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬರುವ ಮುನ್ನ ಸಾತನೂರು ಕ್ಷೇತ್ರದಿಂದ 4 ಬಾರಿ ಶಾಸಕರಾಗಿದ್ದರು. ತದನಂತರ 2008 ರಿಂದ ಕನಕಪುರ ಕ್ಷೇತ್ರ ಪ್ರತಿನಿಧಿಸುತ್ತಿದ್ದು, ಇಲ್ಲಿಯವರೆಗೂ ಕಳೆದ 15 ವರ್ಷಗಳಿಂದ ಅದೇ ಕ್ಷೇತ್ರದಿಂದ ನಿರಂತರವಾಗಿ ಗೆಲುವು ಸಾಧಿಸುತ್ತಲೇ ಬಂದಿದ್ದಾರೆ. ಕನಕಪುರ ಲೋಕಸಭಾ ಕ್ಷೇತ್ರದಿಂದ ಮಾಜಿ ಪ್ರಧಾನಿ ದೇವೆಗೌಡರ ವಿರುದ್ಧ ಸ್ಪರ್ಧಿಸಿ ಸೋತಿದ್ದ ಡಿಕೆಶಿ, ಆ ನಂತರ ಸೋಲನ್ನು ಕಂಡಿಲ್ಲ. ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದು ಮತ್ತು ವಿರೋಧಿಗಳ ಬಲ ಅಷ್ಟಾಗಿ ಇಲ್ಲದಿರುವುದು ಅವರಿಗೆ ಹಿಡಿದ ಕೈಗನ್ನಡಿಯಾಗಿದೆ.
ಈ ಬಾರಿ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿಸಿಕೊಂಡಿರುವ ಡಿಕೆ ಶಿವಕುಮಾರ್ಗೆ ಈ ಕ್ಷೇತ್ರದಲ್ಲಿ ವಿರೋಧಿಗಳೇ ಇಲ್ಲ. ಆದರೂ, ಟಫ್ ಫೈಟ್ ಕೊಡದೇ ಬಿಡರು. ಈ ಹಿಂದೆ ತಮ್ಮ ವಿರುದ್ಧ ಜೆಡಿಎಸ್ನಿಂದ ಸ್ಪರ್ಧಿಸಿ ಅತ್ಯಂತ ಕಡಿಮೆ ಅಂತರದಿಂದ ಸೋತಿದ್ದ ದೂಂತುರು ವಿಶ್ವನಾಥ್ ಅವರನ್ನು ಕಾಂಗ್ರೆಸ್ನತ್ತ ಸೆಳೆಯುವ ಮೂಲಕ ಕ್ಷೇತ್ರದಲ್ಲಿ ಮತ್ತಷ್ಟು ಹಿಡಿತ ಸಾಧಿಸಿಕೊಂಡಿದ್ದು ಸುಳ್ಳಲ್ಲ. ರಾಜ್ಯ ಪ್ರವಾಸ ಮಾಡುತ್ತಿರುವ ಡಿಕೆ ಶಿವಕುಮಾರ್ಗೆ ಸಹೋದರ ಡಿಕೆ ಸುರೇಶ್ ಹೆಗಲಾಗಿದ್ದಾರೆ. ಜೊತೆಗೆ ಕ್ಷೇತ್ರದಲ್ಲಿ ತನ್ನದೇ ಮತಗಳನ್ನು ಹೊಂದಿರುವ ಜೆಡಿಎಸ್, ಪಕ್ಷ ಸಂಘಟನೆಯಿಂದ ಹಿಂದೆ ಬಿದ್ದಿರುವುದು ಡಿಕೆಶಿಗೆ ಪ್ಲಸ್ ಪಾಯಿಂಟ್ ಆಗಬಹುದು.
ಕನಕಪುರದಲ್ಲಿ ನಡೆದ ಪಂಚರತ್ನ ಯಾತ್ರೆ ವೇಳೆ ಕುಮಾರಸ್ವಾಮಿ ಸೂಕ್ತ ಅಭ್ಯರ್ಥಿ ನಿಲ್ಲಿಸುವ ಭರವಸೆಯನ್ನು ನೀಡಿದ್ದರು. ಅದರಂತೆ ಜೆಡಿಎಸ್ ಟಿಕೆಟ್ ಆಕಾಂಕ್ಷಿತರ ಪಟ್ಟಿಯಲ್ಲಿ ಮಾಜಿ ತಾಪಂ ಅಧ್ಯಕ್ಷ ಬಾಲನರಸಿಂಹಯ್ಯ ಮುಂದಿದ್ದಾರೆ. ಬಿಜೆಪಿ ಕೂಡ ಈ ಬಾರಿ ಹಳೆ ಮೈಸೂರು ಭಾಗವನ್ನು ಟಾರ್ಗೆಟ್ ಮಾಡಿಕೊಂಡಿದ್ದು, ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಕ್ಷೇತ್ರದಲ್ಲಿ ಹೆಚ್ಚಿನ ಮತಗಳನ್ನು ಗಳಿಸುವ ತಂತ್ರದಲ್ಲಿದೆ. ಈ ಪಕ್ಷದಿಂದ ಕನಕಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗನ್ನಾಥ್ ಹಾಗೂ ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ನಂದಿನಿಗೌಡ ಇಬ್ಬರ ನಡುವೆ ಟಿಕೆಟ್ ಪೈಟ್ ಇದೆ.
ಒಟ್ಟು ಮತದಾರರು: ಕ್ಷೇತ್ರದಲ್ಲಿ 2,21,591 ಒಟ್ಟು ಮತದಾರರು ಇದ್ದಾರೆ. ಅದರಲ್ಲಿ 1,09,711 ಪುರುಷ ಮತದಾರರು, 1,11,870 ಮಹಿಳಾ ಮತದಾರರು ಇದ್ದಾರೆ. ಕ್ಷೇತ್ರದಲ್ಲಿ ಒಕ್ಕಲಿಗರ ಸಮುದಾಯವೇ ನಿರ್ಣಾಯಕ. ಇವರೊಂದಿಗೆ ಎಸ್ಸಿ-ಎಸ್ಟಿ, ಲಿಂಗಾಯತ, ಅಲ್ಪ ಸಂಖ್ಯಾತ ಹಾಗೂ ಕುರುಬ ಸಮುದಾಯ ಕೂಡ ಇದ್ದಾರೆ.
ಕಳೆದ ಚುನಾವಣಾ ಫಲಿತಾಂಶ: 2008ರ ಚುನಾವಣೆಯಲ್ಲಿ 68,096 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಶಿವಕುಮಾರ್ ಅವರು ಶಾಸಕರಾದರು. 60,917 ಮತಗಳನ್ನು ಪಡೆದ ಜೆಡಿಎಸ್ ಅಭ್ಯರ್ಥಿ ದಿಎಂ ವಿಶ್ವನಾಥ್ ಅವರು 7,179 ಮತಗಳ ಅಂತರಗಳಿಂದ ಸೋಲು ಕಂಡಿದ್ದರು.
2013ರ ಚುನಾವಣೆಯಲ್ಲಿ 1,00,007 ಮತಗಳನ್ನು ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಶಿವಕುಮಾರ್, ಜೆಡಿಎಸ್ ಅಭ್ಯರ್ಥಿಯಾಗಿದ್ದ ಪಿಜಿಆರ್ ಸಿಂಧಿಯಾ ಅವರನ್ನು ಸೋಲಿಸಿದ್ದರು. 68,583 ಮತಗಳನ್ನು ಪಡೆದ ಪಿಜಿಆರ್ ಸಿಂಧಿಯಾ 31,424 ಮತಗಳ ಅಂತರಿಂದ ಸೋಲುಂಡಿದ್ದರು. ಈ ಅವಧಿಯಲ್ಲಿ ಡಿಕೆ ಶಿವಕುಮಾರ್ ಇಂಧನ ಸಚಿವರಾಗಿಯೂ ಕಾರ್ಯ ನಿರ್ವವಹಿಸಿದ್ದರು.
2018ರ ಚುನಾವಣೆಯಲ್ಲಿ 1,27,552 ಮತಗಳನ್ನು ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಶಿವಕುಮಾರ್ ಅವರು ಜೆಡಿಎಸ್ ಅಭ್ಯರ್ಥಿಯಾಗಿದ್ದ ನಾರಾಯಣಗೌಡಗೆ ಭಾರಿ ಅಂತರದಿಂದ ಸೋಲುಣಿಸಿದ್ದರು. 47,643 ಮತಗಳನ್ನು ಪಡೆದಿದ್ದ ನಾರಾಯಣಗೌಡ ಬರೋಬ್ಬರಿ 79,909 ಮತಗಳಿಂದ ಸೋತಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಹೆಚ್. ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಜಲಸಂಪನ್ಮೂಲ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿಯೂ ಕಾರ್ಯನಿರ್ವಹಿಸಿದರು. 2020ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆ ಆಗಿ ಈಗಲೂ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ.