ರಾಯಪುರ(ಛತ್ತೀಸ್‌ಗಢ): ಛತ್ತೀಸ್‌ಗಢದಲ್ಲಿ ಭೂಪೇಶ್ ಬಾಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರದ 13 ಸಚಿವರಲ್ಲಿ ಒಂಬತ್ತು ಮಂದಿ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಈ ಪೈಕಿ ಉಪ ಮುಖ್ಯಮಂತ್ರಿ ಟಿ.ಎಸ್.ಸಿಂಗ್ ದೇವ್ ಮತ್ತು ಗೃಹ ಸಚಿವ ತಾಮ್ರಧ್ವಜ್ ಸಾಹು ಸೇರಿದ್ದಾರೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಭರ್ಜರಿ ಗೆಲುವಿನ ನಂತರ ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದ ಪ್ರಮುಖ ನಾಯಕ, ರಾಜ್ಯ ಘಟಕದ ಮುಖ್ಯಸ್ಥ ದೀಪಕ್ ಬೈಜ್ ಪರಾಭವಗೊಂಡಿದ್ದಾರೆ.
90,686 ಮತಗಳನ್ನು ಪಡೆದಿದ್ದ ಸಿಂಗ್ ದೇವು ಅವರು ಅಂಬಿಕಾಪುರದಿಂದ ಬಿಜೆಪಿಯ ರಾಜೇಶ್ ಅಗರವಾಲ್ (90,780 ಮತಗಳು) ವಿರುದ್ಧ 94 ಮತಗಳಿಂದ ಸೋತಿದ್ದಾರೆ. ದುರ್ಗ್ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಲಲಿತ್ ಚಂದ್ರಕರ್ ಅವರು ಗೃಹ ಸಚಿವ ತಾಮ್ರಧ್ವಜ್ ಸಾಹು ಅವರನ್ನು 16,642 ಮತಗಳಿಂದ ಮಣಿಸಿದ್ದಾರೆ.
ಕೃಷಿ ಸಚಿವ ರವೀಂದ್ರ ಚೌಬೆ ಅವರು ಬಿಜೆಪಿಯ ಈಶ್ವರ್ ಸಾಹು ವಿರುದ್ಧ ಸಜಾದಲ್ಲಿ 5,196 ಮತಗಳಿಂದ ಸೋತರು. ಕವರ್ಧಾ ಕ್ಷೇತ್ರದಲ್ಲಿ ಬಿಜೆಪಿಯ ವಿಜಯ್ ಶರ್ಮಾ ಅವರು ಸಚಿವ ಮೊಹಮ್ಮದ್ ಅಕ್ಬರ್ ಅವರನ್ನು 39,592 ಮತಗಳಿಂದ ಸೋಲಿಸಿದರು.
ಸಚಿವರಾದ ಶಿವಕುಮಾರ್ ದಹರಿಯಾ (ಅರಂಗ್), ಗುರು ರುದ್ರ ಕುಮಾರ್ (ನವಾಗರ್), ಅಮರಜೀತ್ ಭಗತ್ (ಸೀತಾಪುರ್), ಮೋಹನ್ ಮಾರ್ಕಮ್ (ಕೊಂಡಗಾಂವ್) ಮತ್ತು ಜೈ ಸಿಂಗ್ ಅಗರವಾಲ್ (ಕೋರ್ಬಾ) ಪರಾಭವಗೊಂಡಿದ್ದಾರೆ.
ಪಟಾನ್ ಕ್ಷೇತ್ರ ಉಳಿಸಿಕೊಂಡ ಸಿಎಂ: ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಪಟಾನ್ ಕ್ಷೇತ್ರದ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶ ಕಂಡಿದ್ದಾರೆ. ಸಂಪುಟ ಸಹೋದ್ಯೋಗಿಗಳಾದ ಉಮೇಶ್ ಪಟೇಲ್ (ಖಾರ್ಸಿಯಾ), ಅನಿಲ ಭೆಂಡಿಯಾ (ದೋಂಡಿ ಲೋಹರಾ) ಮತ್ತು ಕವಾಸಿ ಲಖ್ಮಾ (ಕೊಂಟಾ) ತಮ್ಮ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ದೀಪಕ್ ಬೈಜ್ ಚಿತ್ರಕೋಟ್‌ನಲ್ಲಿ ಬಿಜೆಪಿಯ ವಿನಾಯಕ್ ಗೋಯಲ್ ವಿರುದ್ಧ 8,370 ಮತಗಳ ಅಂತರದಿಂದ ಸೋತಿದ್ದಾರೆ.
90 ಸದಸ್ಯ ಬಲ ಹೊಂದಿರುವ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ 54 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 35ಕ್ಕೆ ಕುಸಿದಿದೆ.
ಇದನ್ನೂ ಓದಿ: ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶದಲ್ಲಿ ಅರಳಿದ ಕಮಲ: ತೆಲಂಗಾಣದಲ್ಲಿ "ಕೈ" ಹಿಡಿದ ಮತದಾರ