ಬೆಂಗಳೂರು: ಚಾಮರಾಜನಗರ ಮತ್ತು ವರುಣಾ ಎರಡೂ ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಚಿವ ವಿ.ಸೋಮಣ್ಣ ಅವರಿಗೆ ಬಿಜೆಪಿ ಟಿಕೆಟ್ ಪ್ರಕಟಿಸಿದೆ. ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸೋಮಣ್ಣ ಸ್ಪರ್ಧಿಸಲಿದ್ದಾರೆ. ಸಚಿವ ಆರ್.ಅಶೋಕ್ ಅವರಿಗೆ ಪದ್ಮನಾಭನಗರ ಮತ್ತು ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಹಂಚಿಕೆ ಮಾಡಲಾಗಿದೆ.
ಕನಕಪುರದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕಟ್ಟಿ ಹಾಕಲು ಅಶೋಕ್ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಮೂಲಕ ಕೈ ಪಕ್ಷದ ಇಬ್ಬರು ಘಟಾನುಘಟಿ ನಾಯಕರನ್ನು ಅವರ ಕ್ಷೇತ್ರದಲ್ಲೇ ಮಣಿಸಲು ಬಿಜೆಪಿ ಭಾರಿ ರಣತಂತ್ರ ರೂಪಿಸಿದೆ. ಇನ್ನು, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಹಾಗೂ ಶಿವಮೊಗ್ಗ ನಗರ ಕ್ಷೇತ್ರವನ್ನು ಬಾಕಿ ಉಳಿಸಿಕೊಳ್ಳಲಾಗಿದೆ.
ಸೋಮಣ್ಣಗೆ ಡಬಲ್ ಹೊಣೆಗಾರಿಕೆ: ತೀವ್ರ ಕುತೂಹಲ, ಜಿದ್ದಾಜಿದ್ದಿನಿಂದ ಕೂಡಿದ್ದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕೊನೆಗೂ ಇಂದು ಬಿಡುಗಡೆಯಾಗಿದ್ದು, ಚಾಮರಾಜನಗರ ಮತ್ತು ವರುಣದಲ್ಲಿ ವಿ.ಸೋಮಣ್ಣ ಬಿಜೆಪಿ ಕಲಿಯಾಗಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಈ ಎರಡೂ ಕ್ಷೇತ್ರಗಳಲ್ಲಿ ಲಿಂಗಾಯತರ ಪ್ರಾಬಲ್ಯವಿದ್ದರೂ ಕಾಂಗ್ರೆಸ್ ಭದ್ರವಾಗಿ ನೆಲೆಯೂರಿದೆ. ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಿಸಲೇ ಬೇಕೆಂದು ಪಣ ತೊಟ್ಟಿರುವ ಕೇಸರಿಪಡೆಗೆ ವಿ.ಸೋಮಣ್ಣ ಸಾರಥಿಯಾಗಿದ್ದು ಎರಡು ಟಿಕೆಟ್ಗಳನ್ನು ಕೊಡುವ ಮೂಲಕ ವಸತಿ ಸಚಿವಗೆ ಸೋಮಣ್ಣಗೆ ಡಬಲ್ ಹೊಣೆವಹಿಸಿದೆ.
ಪುತ್ರ ಹಾಗು ತಮಗೂ ಸೇರಿ ಎರಡು ಟಿಕೆಟ್ಗಳನ್ನು ವಿ.ಸೋಮಣ್ಣ ಕೇಳಿದ್ದರು. ಆದರೆ, ಹೈಕಮಾಂಡ್ ಏನೋ 2 ಟಿಕೆಟ್ ಕೊಟ್ಟಿದೆ. ಆದರೆ, ಸೋಮಣ್ಣ ಅವರೇ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಬೇಕಾದ ಅನಿವಾರ್ಯತೆ ಮತ್ತು ತಮ್ಮ ವರ್ಚಸ್ಸನ್ನು ತೋರಬೇಕಾದ ಕಾಲ ಎದುರಾಗಿದೆ. ಲಿಂಗಾಯತ ಸಮುದಾಯದ ನಾಯಕನಾಗಿರುವ ವಿ.ಸೋಮಣ್ಣ ಕಾಂಗ್ರೆಸ್ನ ಮಾಸ್ ಲೀಡರ್ ಸಿದ್ದರಾಮಯ್ಯ ಅವರನ್ನು ಮಣಿಸುವ ಜೊತೆಗೆ ಕಳೆದ ಮೂರು ಸಾಲಿನಿಂದ ಕೈ ವಶದಲ್ಲಿರುವ ಚಾಮರಾಜನಗರದಲ್ಲಿ ಕಮಲ ಅರಳಿಸುವ ಡಬಲ್ ಟಾರ್ಗೆಟ್ ಕೊಟ್ಟಿದೆ ಮೋದಿ ಟೀಂ.
ಸಾಂಪ್ರದಾಯಿಕ ಎದುರಾಳಿಗೆ ಟಿಕೆಟ್: ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದಲ್ಲಿ ಆರಂಭದಿಂದಲೂ ಎರಡು ಕುಟುಂಬಗಳ ನಡುವೆಯೇ ಫೈಟ್ ನಡೆಯುತ್ತಿದ್ದು, ಇದು ಈ ಬಾರಿಯೂ ಮುಂದುವರೆಯಲಿದೆ. ಕಾಂಗ್ರೆಸ್ನಿಂದ ಆರ್.ನರೇಂದ್ರ ಕಣಕ್ಕಿಳಿಯಲಿದ್ದು ಬಿಜೆಪಿಯಿಂದ ಡಾ.ಪ್ರೀತಂ ನಾಗಪ್ಪರನ್ನು ಕಣಕ್ಕಿಳಿಸಲು ಬಿಜೆಪಿ ಗ್ರೀನ್ ಸಿಗ್ನಲ್ ಕೊಟ್ಟಿದೆ. ನಿರೀಕ್ಷೆಯಂತೆ ಕೊಳ್ಳೇಗಾಲದಲ್ಲಿ ಹಾಲಿ ಶಾಸಕ ಎನ್.ಮಹೇಶ್ ಮತ್ತು ಗುಂಡ್ಲುಪೇಟೆಯಲ್ಲಿ ಹಾಲಿ ಶಾಸಕ ನಿರಂಜನಕುಮಾರ್ ಕಮಲ ಕಲಿಗಳಾಗಿ ರಣರಂಗಕ್ಕೆ ಇಳಿಯಲಿದ್ದಾರೆ.
ಇದನ್ನೂ ಓದಿ: ಬೇರೆ ಪಕ್ಷದವರು ನನ್ನೊಂದಿಗೆ ಮಾತಾಡಿಲ್ಲ; ನಾನು ಸ್ಪರ್ಧೆ ಮಾಡೋದು ಖಚಿತ- ಶೆಟ್ಟರ್