ಮಂಡ್ಯದಲ್ಲಿಯೂ ರಾಮಮಂದಿರ ಉದ್ಘಾಟನೆ, ಶಿಲ್ಪಿ ಯೋಗಿರಾಜ್ ಕೆತ್ತಿದ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ - ಸಕ್ಕರೆ ಜಿಲ್ಲೆ ಖ್ಯಾತಿಯ ಮಂಡ್ಯ
Published : Jan 22, 2024, 10:59 PM IST
ಮಂಡ್ಯ: ಅಯೋಧ್ಯೆಯಲ್ಲಿ ರಾಮಲಲ್ಲಾನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಾಗಿದ್ದು, ಕೋಟ್ಯಂತರ ಜನರ ಕನಸು ನನಸಾಗಿದೆ. ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ವೀಕ್ಷಿಸಿ ದೇಶದ ಕೋಟಿ ಕೋಟಿ ಜನರು ಇಂದು ಸಂಭ್ರಮಿಸಿದ್ದಾರೆ. ಅದರಂತೆ ಇಂದು ಸಕ್ಕರೆ ಜಿಲ್ಲೆ ಖ್ಯಾತಿಯ ಮಂಡ್ಯದಲ್ಲಿಯೂ ಕೂಡ ರಾಮಮಂದಿರ ಉದ್ಘಾಟನೆಗೊಂಡಿದೆ. ಅಯೋಧ್ಯೆ ರಾಮಲಲ್ಲಾನ ಮೂರ್ತಿ ಕೆತ್ತಿರುವ ಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿರುವ ಶ್ರೀರಾಮನ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ.
ಅಯೋಧ್ಯೆಯ ರಾಮಲಲ್ಲಾನ ಮೂರ್ತಿಯನ್ನ ನಮ್ಮ ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿದ್ದಾರೆ. ಮಂಡ್ಯದ ಲೇಬರ್ ಕಾಲೊನಿ ರಾಮಮಂದಿರದಲ್ಲೂ ಅರುಣ್ ಯೋಗಿರಾಜ್ ಅವರು ಕೆತ್ತಿನ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ದಿನ ಮಂಡ್ಯದಲ್ಲಿಯೂ ಕೂಡ ರಾಮನ ಮೂರ್ತಿ ಪ್ರತಿಷ್ಠಾಪನೆ ಆಗಿರುತ್ತಿರುವುದಕ್ಕೆ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.
ಶ್ರೀರಾಮ ಸೇವಾ ಟ್ರಸ್ಟ್ ದಿಂದ ವಿವಿಧ ಪೂಜಾ ಕೈಂಕರ್ಯ ಜರುಗಿದ್ದು, ಬೆಳಗಿನಿಂದಲೇ ವಿಶೇಷ ಹೋಮ ಹವನ ನಡೆದವು. ಕಳೆದ 14 ವರ್ಷಗಳ ಪರಿಶ್ರಮದಿಂದ ನಿರ್ಮಾಣಗೊಂಡಿರುವ ರಾಮಮಂದಿರ ಅಂತಿಮವಾಗಿ ಉದ್ಘಾಟನೆಯಾಗಿದೆ. ರಾಮನ ವಿಗ್ರಹದ ಜೊತೆ ಹನುಮ, ಲಕ್ಷ್ಮಣ, ಸೀತಾ ಮಾತೆಯ ಮೂರ್ತಿಗಳು ಸಹ ಇವೆ. ಮೀನ ಶುಭ ಲಗ್ನದಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು. ಮೂರ್ತಿಗೆ ಬೆಳ್ಳಿಯ ಕಿರೀಟ ಧಾರಣೆ ಮಾಡುವ ಮೂಲಕ ಪೂಜೆ ಸಲ್ಲಿಸಲಾಯಿತು.
ಇನ್ನು ರಾಮ ಮಂದಿರಕ್ಕೆ ವಿಶೇಷ ಅಗರಬತ್ತಿಯನ್ನ ಬಿಜೆಪಿ ಮುಖಂಡರ ನೀಡಿದರು. ಬಳಿಕ ಸಾಲಿನಲ್ಲಿ ನಿಂತು ನೂರಾರು ಭಕ್ತರು ದರ್ಶನ ಪಡೆದು ಭಕ್ತಿ ಮೆರೆದರು.
ಇದನ್ನೂಓದಿ:ಕೋಟ್ಯಂತರ ಜನರ ಕನಸು ಸಾಕಾರ; ಅಯೋಧ್ಯೆದಲ್ಲಿ ಪ್ರತಿಷ್ಠಾಪನೆಯಾದ ಶ್ರೀರಾಮ