ಪುರಿ ಜಗನ್ನಾಥ ದೇವಸ್ಥಾನದ ಎಲ್ಲಾ 4 ದ್ವಾರಗಳು ರೀ ಓಪನ್: ಇಂದಿನಿಂದ ಭಕ್ತರ ಪ್ರವೇಶಕ್ಕೆ ಮುಕ್ತ.. ದೇಗುಲಕ್ಕೆ ನೂತನ ಸಿಎಂ ಭೇಟಿ - puri temple four gates re open
Published : Jun 13, 2024, 11:10 AM IST
ಪುರಿ (ಒಡಿಶಾ): ಪುರಿ ಜಗನ್ನಾಥ ದೇವಾಲಯದ ಎಲ್ಲ ನಾಲ್ಕು ದ್ವಾರಗಳನ್ನು ಭಕ್ತರ ದರ್ಶನಕ್ಕಾಗಿ ಮತ್ತೆ ತೆರೆಯಲಾಗಿದೆ. ಬೆಳಗ್ಗೆ ರಾಜ್ಯದ ನೂತನ ಸಿಎಂ ಮೊಹನ್ ಚರಣ್ ಮಾಝಿ ದೇವಸ್ಥಾನಕ್ಕೆ ತೆರಳಿ ಜಗನ್ನಾಥನಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಸಚಿವರು ಮತ್ತು ಸಂಸದರ ಸಮ್ಮುಖದಲ್ಲಿ ದ್ವಾರಗಳನ್ನು ತೆರೆದರು. ಈ ಮೂಲಕ ಇಂದಿನಿಂದ ಭಕ್ತರು 4 ದ್ವಾರಗಳಿಂದ ದೇವಸ್ಥಾನದ ಒಳಗೆ ಪ್ರವೇಶಿಸಬಹುದಾಗಿದೆ.
ಬುಧವಾರ (ನಿನ್ನೆ) ನಡೆದ ಸಚಿವ ಸಂಪುಟ ಸಭೆಯಲ್ಲಿ ಜಗನ್ನಾಥ ದೇವಾಲಯದ ಎಲ್ಲ ನಾಲ್ಕು ದ್ವಾರಗಳನ್ನು ಪುನಃ ತೆರೆಯುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿತ್ತು. ಜತೆಗೆ ದೇವಸ್ಥಾನಕ್ಕೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಲು ಸರ್ಕಾರ 500 ಕೋಟಿ ರೂಪಾಯಿಗಳ ವಿಶೇಷ ನಿಧಿ ಘೋಷಿಸಿತ್ತು.
ಈ ಹಿಂದೆ ಕೋವಿಡ್ 19 ಸಾಂಕ್ರಾಮಿಕ ರೋಗದ ಕಾರಣ ದೇವಾಲಯದ ಎಲ್ಲ ನಾಲ್ಕು ದ್ವಾರಗಳನ್ನು ಮುಚ್ಚಿ ದ್ವಾರವೊಂದರ ಮೂಲಕ ದರ್ಶನಕ್ಕೆ ಬಿಡಲಾಗುತಿತ್ತು. ಇದರಿಂದ ಭಕ್ತರು ಸಮಸ್ಯೆಗಳನ್ನು ಎದುರಿಸುವಂತಾಗಿತ್ತು. ಅಲ್ಲದೇ ಎಲ್ಲ ದ್ವಾರಗಳನ್ನು ಪುನಃ ತೆರೆಯಬೇಕು ಎಂದು ಭಕ್ತರು ಬೇಡಿಕೆಯನ್ನಿಟ್ಟಿದ್ದರು. ಇದೇ ವಿಚಾವಾಗಿ ಚುನಾವಣೆ ಪೂರ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಜಗನ್ನಾಥ ದೇಗುಲದ ಎಲ್ಲಾ ನಾಲ್ಕು ದ್ವಾರಗಳನ್ನು ಮತ್ತೆ ತೆರೆಯಲಾಗುತ್ತದೆ ಎಂದು ನಾಯಕರು ಭರವಸೆ ನೀಡಿದ್ದರು. ಅದರಂತೆ ಅಧಿಕಾರಕ್ಕೆ ಬರುತ್ತಿದ್ದಂತೆ 5 ವರ್ಷಗಳಿಂದ ಮುಚ್ಚಲಾಗಿದ್ದ 4 ದ್ವಾರಗಳನ್ನು ಪುನಃ ತೆರೆದು ಭಕ್ತರ ಬೇಡಿಕೆಯನ್ನು ಬಿಜೆಪಿ ಸರ್ಕಾರ ಈಡೇರಿಸಿದೆ.
ನಿನ್ನೆ ಪ್ರಮಾಣ ವಚನ, ಇಂದು ಜಗನ್ನಾಥನ ದರ್ಶನ: ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ ಜಗನ್ನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪುರಿ ಸಂಸದ ಸಂಬಿತ್ ಪಾತ್ರ, ಬಾಲಸೋರ್ ಸಂಸದ ಪ್ರತಾಪ್ ಚಂದ್ರ ಸಾರಂಗಿ ಮತ್ತು ನೂತನ ಸಂಪುಟ ಸಚಿವರು ಮತ್ತು ಮುಖಂಡರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.
ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಒಡಿಶಾದ ನೂತನ ಸಿಎಂ ಆಗಿ ಮೋಹನ್ ಚರಣ್ ಮಾಝಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು.