ಕರ್ನಾಟಕ ಸರ್ಕಾರದಿಂದ ಹಣ ದುರುಪಯೋಗ ಆರೋಪ: ಬಿಜೆಪಿ ಸಂಸದರಿಂದ ದೆಹಲಿಯಲ್ಲಿ ಪ್ರತಿಭಟನೆ - ಪ್ರತಿಭಟನೆ
Published : Feb 7, 2024, 11:40 AM IST
|Updated : Feb 7, 2024, 11:52 AM IST
ನವದೆಹಲಿ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಸತ್ತಿನ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಪ್ರತಿಭಟನೆ ಆರಂಭಿಸಿರುವ ಬಿಜೆಪಿ ಕರ್ನಾಟಕ ಸಂಸದರು ಕಾಂಗ್ರೆಸ್ ಸರ್ಕಾರ ವಿರುದ್ಧ ದಿಕ್ಕಾರ ಕೂಗುತ್ತಿದ್ದಾರೆ. ಕರ್ನಾಟಕ ಸರ್ಕಾರದಿಂದ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿ ಬಿಜೆಪಿ ಕರ್ನಾಟಕ ಸಂಸದರು ವಿವಿಧ ಘೋಷಣೆಗಳೊಂದಿಗೆ ದಿಕ್ಕಾರ ಹಾಕುತ್ತಿದ್ದಾರೆ.
ಹಾಗೇ ಬೆಂಗಳೂರಲ್ಲಿ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನಪರಿಷತ್ ಪ್ರತಿ ಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ನವರು ಜಂತರ್ಮಂತರ್ನಲ್ಲಿ ಪ್ರತಿಭಟನೆ ಮಾಡುತ್ತಿದ್ದರೆ ಟಕ್ಕರ್ ಎನ್ನುವಂತೆ ಅದೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಕರ್ನಾಟಕ ಬಿಜೆಪಿ ಸಂಸದರು ಸಂಸತ್ತಿನ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ನಿನ್ನೆಯೆ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕರು ಪ್ರತಿಭಟನೆಗೆ ಸೇರುವಂತೆ ಕರೆ ನೀಡಿದ್ದರು. ಈ ಮೂಲಕ ಬರ ಪರಿಹಾರ ವಿತರಣೆ ಮಾಡದಿರುವ ಸರ್ಕಾರದ ಕ್ರಮ ಖಂಡಿಸುವುದು ಸೇರಿದಂತೆ ರಾಜ್ಯ ಸರ್ಕಾರದ ವೈಫಲ್ಯಗಳ ಮೇಲೆ ಬೆಳಕು ಚೆಲ್ಲಿ ಕಾಂಗ್ರೆಸ್ಗೆ ತಕ್ಕ ತಿರುಗೇಟು ನೀಡಲು ನಿರ್ಧರಿಸಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಸ್ವತಃ 222 ಕ್ಕೂ ಹೆಚ್ಚು ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದ್ದರೂ, ಈವರೆಗೂ ಕುಡಿಯುವ ನೀರಿನ ಸಮಸ್ಯೆಯೂ ಸೇರಿದಂತೆ ಬರ ಪರಿಹಾರದ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಈ ಪ್ರತಿಭಟನೆಯನ್ನು ರಾಜ್ಯ ಬಿಜೆಪಿ ಹಮ್ಮಿಕೊಂಡಿದೆ.
ಇದನ್ನೂ ಓದಿ: ಕಾಂಗ್ರೆಸ್ ದೆಹಲಿ ಪ್ರತಿಭಟನೆಗೆ ಬಿಜೆಪಿ ಕೌಂಟರ್: ವಿಧಾನಸೌಧದಲ್ಲಿಂದು ಬಿಜೆಪಿ ಹೋರಾಟ