ಮನೆಯಲ್ಲಿದ್ದ ಐಫೋನ್ ಎತ್ತೊಯ್ದು ಟವರ್ ಮೇಲೆ ಕುಳಿತ ಕೋತಿ; ಮಂಗನಾಟಕ್ಕೆ ಕಂಗಾಲಾದ ಮೊಬೈಲ್ ಒಡತಿ! - iPhone in Monkey hand - IPHONE IN MONKEY HAND
Published : Sep 22, 2024, 9:54 PM IST
ದೊಡ್ಡಬಳ್ಳಾಪುರ: ಮಂಗನ ಕೈಯಲ್ಲಿ ಮಾಣಿಕ್ಯ ಸಿಕ್ಕರೆ ಹೆಂಗೆಂಗೋ ಆಡಿತ್ತು ಎಂಬ ಮಾತಿನಂತೆ, ಮಂಗವೊಂದು ಮನೆಯಲ್ಲಿದ್ದ ಐಫೋನ್ ಎತ್ತೊಯ್ದು ಮೊಬೈಲ್ ಟವರ್ ಮೇಲೆ ಕುಳಿತು ಜನರಿಗೆ ಪುಕ್ಕಟೆ ಮನರಂಜನೆ ನೀಡಿದೆ.
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮದಲ್ಲಿ ಭಾನುವಾರ ಸಂಜೆ (ಸೆ.22) ಈ ವಿಚಿತ್ರ ಘಟನೆ ಜರುಗಿದ್ದು, ತುಳಸಿ ಎಂಬ ಮಹಿಳೆಗೆ ಸೇರಿದ ಐಫೋನನ್ನು ಮನೆಗೆ ನುಗ್ಗಿದ ಮಂಗವೊಂದು ಎತ್ತೊಯ್ದು ಟವರ್ ಮೇಲೆ ಕುಳಿತಿತ್ತು. ಮಂಗನಿಂದ ಐಫೋನ್ ಪಡೆದುಕೊಳ್ಳಲು ಸ್ಥಳೀಯರು ಸಾಕಷ್ಟು ಹರಸಾಹಸ ಪಟ್ಟರು. ಐಫೋನ್ ಕೊಡುವಂತೆ ಜನರು ಎಷ್ಟೇ ಬೇಡಿದ್ರೂ, ಆ ಕೋತಿ ಮಾತ್ರ ಐಫೋನ್ ಕೊಡಲಿಲ್ಲ. ಈ ದೃಶ್ಯ ನೋಡುಗರಿಗೆ ಪುಕ್ಕಟೆ ಮನರಂಜನೆ ನೀಡಿತು. ಮಂಗನಿಗೆ ಆಟ ಐಫೋನ್ ಒಡತಿಗೆ ಮಾತ್ರ ಸಂಕಟ ತಂದಿಟ್ಟಿತು.
ಕೊನೆಗೂ, ಮಂಗ ಐಫೋನ್ ಕೆಳಗೆ ಎಸೆದಿದ್ದು, ಫೋನ್ ಸಿಕ್ತು ಎನ್ನುವ ಖುಷಿಯಲ್ಲಿದ್ದವರಿಗೆ ಮೇಲಿಂದ ಬಿದ್ದ ಮೊಬೈಲ್ ಸ್ಕ್ರೀನ್ ಒಡೆದು ಹೋಗಿದೆ. ತೂಬಗೆರೆ ಗ್ರಾಮದಲ್ಲಿ ಮಂಗಗಳ ಉಪಟಳ ಹೆಚ್ಚಾಗಿದ್ದು, ಕೋತಿಗಳನ್ನು ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸುವಂತೆ ಜನರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ರಸ್ತೆಯಲ್ಲಿ ಲಾರಿ ತಡೆದು ಕಬ್ಬು ಸವಿದ ಗಜರಾಜ: ವಿಡಿಯೋ - Elephant Stops Truck Eat Sugarcane