ಮದ್ಯದ ವಾಸನೆಗೆ ಹತ್ತಿರ ಬಂದ ವ್ಯಕ್ತಿಯನ್ನ ಎತ್ತಿ ಎಸೆದ ಕುಕ್ಕೆ ಸುಬ್ರಹ್ಮಣ್ಯ ದೇವಳದ ಆನೆ! ವಿಡಿಯೋ - Elephant threw away a person - ELEPHANT THREW AWAY A PERSON
Published : Jun 27, 2024, 1:27 PM IST
ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆನೆಯು ಮದ್ಯದ ವಾಸನೆ ಬಂದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಸೋಂಡಿಲಿನಿಂದ ಎತ್ತಿ ಎಸೆದಿರುವ ಘಟನೆ ನಡೆದಿದೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನದ ಆನೆ ಯಶಸ್ವಿನಿಯನ್ನು ಮಾವುತ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ವಿಡಿಯೋದಲ್ಲಿ ಇಬ್ಬರು ಪೊಲೀಸರು ಆನೆಯ ಬಳಿಗೆ ಬಂದು ಫೋಟೋ ತೆಗೆಯಲು ಮುಂದಾಗುತ್ತಾರೆ. ಆದರೆ ಅದೇ ಸಮಯಕ್ಕೆ ವ್ಯಕ್ತಿಯೊಬ್ಬ ಅದರ ಬಳಿ ಹಾದು ಹೋಗುತ್ತಿದ್ದಂತೆ ಆನೆ ಸೋಂಡಿಲಿನಲ್ಲಿ ಆತನನ್ನು ಎತ್ತಿ ಪಕ್ಕಕ್ಕೆ ಎಸೆದಿದೆ. ಆನೆ ಎಸೆಯುತ್ತಿದ್ದಂತೆ ಆತ ಒಂದಷ್ಟು ದೂರಕ್ಕೆ ಹೋಗಿ ಬಿದ್ದಿದ್ದಾನೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ವೇಳೆ ಮಾವುತ "ಮದ್ಯಪಾನ ಮಾಡಿ ಯಾಕೆ ಆನೆಯ ಹತ್ತಿರ ಬರುತ್ತೀರಾ?" ಎಂದು ಹೇಳುತ್ತಿರುವುದು ಕೇಳಿ ಬಂದಿದೆ.
"ಯಶಸ್ವಿನಿ ಆನೆಗೆ ಮದ್ಯದ ವಾಸನೆ ಆಗುವುದಿಲ್ಲ. ಮದ್ಯಪಾನಿಗಳು ಅದರ ಹತ್ತಿರ ಸುಳಿದಾಡಿದರೆ ಅದರ ವರ್ತನೆ ಬದಲಾಗುತ್ತದೆ. ಮಾತ್ರವಲ್ಲದೆ ಅವರನ್ನು ಎತ್ತಿ ಎಸೆಯುತ್ತದೆ. ಈ ಹಿಂದೆಯೂ ಇದೇ ರೀತಿ ಮದ್ಯಸೇವನೆ ಮಾಡಿದವನನ್ನು ಆನೆ ಎತ್ತಿ ಎಸೆದಿರುವ ಘಟನೆ ನಡೆದಿತ್ತು. ದಯಮಾಡಿ ಯಾರೂ ಮದ್ಯಪಾನ ಮಾಡಿ ಆನೆಯ ಬಳಿ ಬರಬೇಡಿ" ಎಂದು ಮಾವುತ ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ಆನೆಯ ಸೋಂಡಿಲಿನಿಂದ ಅದೃಷ್ಟವಶಾತ್ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇದನ್ನೂ ನೋಡಿ: ವಿದ್ಯುತ್ ಸ್ಪರ್ಶದಿಂದ ಆನೆ ಸೇರಿ ವನ್ಯಜೀವಿಗಳ ಸಾವು: ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಹೈಕೊರ್ಟ್ - High Court