ಕಳಸಾ ಬಂಡೂರಿ ಹೋರಾಟ: ಪ್ರಹ್ಲಾದ್ ಜೋಶಿಗೆ ಘೇರಾವ್ ಹಾಕಿ ರೈತರಿಂದ ತರಾಟೆ
Published : Feb 26, 2024, 4:10 PM IST
ಹುಬ್ಬಳ್ಳಿ: ಮಹಾದಾಯಿ ಯೋಜನೆ ವಿಳಂಬಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಕಳಸಾ ಬಂಡೂರಿ ರೈತ ಹೋರಾಟಗಾರರು ಘೇರಾವ್ ಹಾಕಿ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ನಗರದ ಮಯೂರ ಎಸ್ಟೇಟ್ ಜೋಶಿ ನಿವಾಸದ ಎದುರು ರೈತರು ಅಸಮಾಧಾನ ವ್ಯಕ್ತಪಡಿಸಿದರು. ನವಲಗುಂದ - ನರಗುಂದ ಮಹಾದಾಯಿ ಹೋರಾಟಗಾರರು ಜೋಶಿ ಅವರನ್ನು ತಡೆದು ಚುನಾವಣೆಗೂ ಮುನ್ನ ಕಾಮಗಾರಿ ಆರಂಭಕ್ಕೆ ಒತ್ತಾಯಿಸಿದರು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಜೋಶಿ ಅವರ ಕಾರನ್ನು ತಡೆಯುವ ಎಚ್ಚರಿಕೆ ನೀಡಿದರು.
ಕಳೆದ ಹಲವು ಬಾರಿ ನಿಮಗೆ ಮನವಿ ಸಲ್ಲಿಸಿದ್ದೆವು. ಆದ್ರೆ ನೀವು ಕೇವಲ ಆಶ್ವಾಸನೆ ಕೊಡುವುದನ್ನು ಬಿಟ್ಟು ಮತ್ತೇನು ಮಾಡುತ್ತಿಲ್ಲ. ನೀವು ಜನವರಿ ಅಂತ ಹೇಳಿದ್ದೀರಿ. ಈಗ ಫೆಬ್ರವರಿ ಮುಗಿಯುತ್ತಿದೆ. ಏನು ಮಾಡಿದ್ದಿರಿ ಎಂದು ರೈತ ಸುಭಾಶಚಂದ್ರಗೌಡ ಪಾಟೀಲ್ ಅವರು ಸಚಿವರನ್ನು ತರಾಟೆಗೆ ಪ್ರಶ್ನಿಸಿದರು.
ಆಗ ಸಚಿವ ಜೋಶಿ ಸಮಜಾಯಿಸಿ ನೀಡಲು ಪ್ರಯತ್ನಿಸಿದರು. ಅರಣ್ಯ ಇಲಾಖೆ ಹಾಗೂ ವನ್ಯಜೀವಿಗಳ ಸಂರಕ್ಷಣೆ ಇಲಾಖೆ ಅನುಮತಿ ಸಿಗಬೇಕಿದೆ ಎಂದರು. ಆಗ ರೈತ ಮುಖಂಡರು ನೀವು ಕೇಂದ್ರ ಸರ್ಕಾರದಲ್ಲಿ ಇರುವವರು ಎಲ್ಲಾ ಅನುಮತಿ ತೆಗೆದುಕೊಡಬೇಕು. ಎಲ್ಲಾ ಶಾಸಕರು ಹಾಗೂ ಸರ್ಕಾರದ ಜೊತೆ ಮಾತನಾಡಿ ಮುಂದೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಆಗುವುದರೊಳಗಾಗಿ ಕಳಸಾ ಬಂಡೂರಿ ಕಾಮಗಾರಿ ಆರಂಭಿಸಬೇಕು ಎಂದು ಪಟ್ಟುಹಿಡಿದರು.
ಆಗ ಪ್ರಹ್ಲಾದ್ ಜೋಶಿ, ರೈತರನ್ನು ಸಮಾಧಾನಪಡಿಸಿ ಕಾರು ಹತ್ತುವಾಗ ರೈತರು ಕಾಮಗಾರಿ ಆರಂಭವಾಗದೆ ಇದ್ದಲ್ಲಿ ಮತ ಕೇಳಲು ಬನ್ನಿ ಪಾಠ ಕಲಿಸ್ತೇವೆ ಎಂದು ಎಚ್ಚರಿಸಿದರು. ರೈತರ ಎಚ್ಚರಿಕೆಗೆ ತಬ್ಬಿಬ್ಬಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಮಗಾರಿ ಆರಂಭ ಮಾಡ್ತೇವೆ ಎನ್ನುತ್ತಲೇ ಸ್ಥಳದಿಂದ ತೆರಳಿದರು.
ಓದಿ: ಜೈಶಂಕರ್, ಸೀತಾರಾಮನ್ ಸ್ಪರ್ಧೆ ನಿಚ್ಚಳ: ಯಾವ ರಾಜ್ಯದಿಂದ ಎಂಬುದು ತೀರ್ಮಾನ ಆಗಿಲ್ಲ: ಸಚಿವ ಪ್ರಹ್ಲಾದ್ ಜೋಶಿ