ಬಿಳಿಗಿರಿರಂಗನ ಬೆಟ್ಟದಲ್ಲಿ ಓಡಾಡುತ್ತಿದ್ದ ಕೂಡುದಂತದ ಕಾಡಾನೆ ಸಾವು
Published : Nov 5, 2024, 8:52 AM IST
ಚಾಮರಾಜನಗರ: ರಾಜ್ಯದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಆಗಾಗ್ಗೆ ದರ್ಶನ ನೀಡುತ್ತಿದ್ದ ಕೂಡುದಂತದ ಕಾಡಾನೆ ಮೃತಪಟ್ಟಿದೆ. ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಯಳಂದೂರು ವನ್ಯಜೀವಿ ವಲಯದ ಕಡಿತಾಳಕಟ್ಟೆ ಗಸ್ತಿನ ವೇಳೆ ಆನೆ ಮೃತಪಟ್ಟಿರುವುದು ಗೊತ್ತಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪಶುವೈದ್ಯ ಡಾ.ವಾಸಿಂ ಮಿರ್ಜಾ ಮರಣೋತ್ತರ ಪರೀಕ್ಷೆ ನಡೆಸಿ ಆನೆ ಸ್ವಾಭಾವಿಕವಾಗಿ ಮೃತಪಟ್ಟಿದೆ ಎಂದು ಖಚಿತಪಡಿಸಿದ್ದಾರೆ. ಮೃತ ಆನೆಗೆ 50ರಿಂದ 55 ವರ್ಷ ವಯಸ್ಸು ಎಂದು ಅಂದಾಜಿಸಿರುವುದಾಗಿ ಅರಣ್ಯ ಇಲಾಖೆ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಬಿಳಿಗಿರಿರಂಗನ ಬೆಟ್ಟದ ಮುಖ್ಯರಸ್ತೆ, ಬಂಗಲೆ ಪೋಡು ಸೇರಿದಂತೆ ವಿವಿಧೆಡೆ ಈ ನೀಳದಂತದ ಕಾಡಾನೆ ಓಡಾಡುತ್ತಿತ್ತು. ಮಾವಿನ ಹಣ್ಣು ಹಾಗೂ ಹಲಸಿನ ಹಣ್ಣಿಗಾಗಿ ಪೋಡುಗಳತ್ತ ಬರುತ್ತಿತ್ತು. ಇದರ ಓಡಾಟದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ಕೆಲವು ತಿಂಗಳ ಹಿಂದಷ್ಟೇ ಬಿಳಿಗಿರಿರಂಗನ ಬೆಟ್ಟದ ಪ್ರವಾಸೋದ್ಯಮ ಇಲಾಖೆಯ ಮಯೂರ ಹೋಟೆಲ್‌ಗೂ ಕಾಡಾನೆ ನುಗ್ಗಿತ್ತು. ಆಹಾರದ ಆಸೆಗಾಗಿ ಬರುತ್ತಿದ್ದ ಈ ಆನೆ ಯಾವುದೇ ಪ್ರಾಣಹಾನಿ ಮಾಡಿರಲಿಲ್ಲ.
ಕೂಡುದಂತದ ಕಾಡಾನೆ ಮೃತಪಟ್ಟಿರುವುದಕ್ಕೆ ಪರಿಸರಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ಕಣ್ಣು ಕಾಣದ ಕಾಡಾನೆ ಕಂದಕಕ್ಕೆ ಬಿದ್ದು ಸಾವು