ಹುಬ್ಬಳ್ಳಿ: ಡ್ರಗ್ ಪೆಡ್ಲರ್ಗಳ ಪರೇಡ್ ನಡೆಸಿದ ಪೊಲೀಸರು; ಖಡಕ್ ವಾರ್ನಿಂಗ್ - Drug Peddlers Parade
Published : Jul 8, 2024, 3:56 PM IST
ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ರೌಡಿಶೀಟರ್, ಡ್ರಗ್ ಪೆಡ್ಲರ್ಗಳಿಂದ ಗಾಂಜಾ ಸರಬರಾಜು ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ನೂತನ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಹಾಗೂ ಕಾನೂನು ಸುವ್ಯವಸ್ಥೆ ಡಿಸಿಪಿ ಮಹಾನಿಂಗ ನಂದಗಾವಿ ಅವರು ಸ್ವತಃ ಫಿಲ್ಡ್ಗೆ ಇಳಿದಿದ್ದಾರೆ.
ಜೊತೆಗೆ ಸಿಎಂ ಸೂಚನೆ ಬೆನ್ನಲ್ಲೇ ಹುಬ್ಬಳ್ಳಿ-ಧಾರವಾಡ ಪೊಲೀಸರು ಕಾನೂನು ಸುವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಡ್ರಗ್ ಮುಕ್ತ ಹುಬ್ಬಳ್ಳಿ-ಧಾರವಾಡ ಮಾಡಲು ಪೊಲೀಸರು ಪಣ ತೊಟ್ಟಿದ್ದು, ಹುಬ್ಬಳ್ಳಿ ಹಳೆ ಸಿಆರ್ ಮೈದಾನದಲ್ಲಿ ಡ್ರಗ್ ಪೆಡ್ಲರ್ಗಳು ಮತ್ತು ರೌಡಿಶೀಟರ್‌ಗಳ ಪರೇಡ್ ನಡೆಸಿದರು.
ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಠಾಣೆಯಲ್ಲಿ ಗುರುತಿಸಿಕೊಂಡಿರುವ 175 ಕ್ಕೂ ಹೆಚ್ಚು ಡ್ರಗ್ ಪೆಡ್ಲರ್ಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ದುಡಿದು ತಿನ್ನಿ, ಸಮಾಜ ಹಾಳು ಮಾಡಿ ಬದುಕಬೇಡಿ. ಕಾನೂನು ನಿಮ್ಮನ್ನು ಬಿಡಲ್ಲ ಅಂತ ವಾರ್ನಿಂಗ್ ಮಾಡಿದ್ದಾರೆ.
ಇನ್ನು ಮುಂದೆ ಯಾವುದೇ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದರೆ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಡಿಸಿಪಿ ಬಿ.ಎಸ್. ನಂದಗಾವಿ ಹಾಗೂ ಅಪರಾಧ ವಿಭಾಗ ಡಿಸಿಪಿ ರವೀಶ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.