ರಾಯಚೂರಿನಲ್ಲಿ ಧಾರಾಕಾರ ಮಳೆ: ಗ್ರಾಮಾಂತರ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತ - Raichur Rainfall
Published : Aug 20, 2024, 5:17 PM IST
ರಾಯಚೂರು: ಜಿಲ್ಲೆಯಾದ್ಯಂತ ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದ ಗ್ರಾಮಾಂತರ ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ತಾಲೂಕಿನ ಗಿಲ್ಲೇಸೂಗೂರು ಗ್ರಾಮದ ವಾರ್ಡ್ ನಂಬರ್ 1ರಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆ ಬದಿಯ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮಳೆ ನೀರು ಸರಾಗವಾಗಿ ಹರಿಯದೇ ಮನೆಗಳಿಗೆ ನುಗ್ಗಿ ಗ್ರಾಮಸ್ಥರು ಇಡೀ ರಾತ್ರಿ ಜಾಗರಣೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ರಾಜಕಾರಣಿಗಳ ವಿರುದ್ಧ ಸ್ಥಳೀಯರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಮಳೆಯ ಅಬ್ಬರದಿಂದಾಗಿ ಇಡಪನೂರು ಗ್ರಾಮದಿಂದ ಮಿರ್ಜಾಪೂರು ಹೋಗುವ ದಾರಿಹಳ್ಳದ ನೀರು ತುಂಬಿ ಹರಿಯುವುದರಿಂದ ಹೊಲ-ಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹತ್ತಿ ಹಾಗೂ ಇತರ ಬೆಳೆಗಳಿಗೆ ಹಾನಿಯಾಗಿದೆ.
ಜಡಿಮಳೆಯಿಂದ ಹಲವೆಡೆ ಸೇತುವೆ ಮೇಲ್ಭಾಗದಲ್ಲಿ ನೀರು ಹರಿದ ಕಾರಣ ಸಂಚಾರ ಸ್ಥಗಿತವಾಗಿತ್ತು. ಅಲ್ಲದೇ ಜಿಲ್ಲೆಯ ವಿವಿಧೆಡೆ ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಸದ್ಯ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿದೆ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಭಾರಿ ಮಳೆ, ಬಡಾವಣೆಗಳಿಗೆ ನುಗ್ಗಿದ ನೀರು; ಕೆರೆ ಏರಿ ಒಡೆದು ಬೆಳೆನಾಶ - Chikkamagaluru Rain