ಅಯೋಧ್ಯೆ ರಾಮಮಂದಿರ ಸಾರ್ವಜನಿಕರಿಗೆ ಮುಕ್ತ; ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ - ರಾಮಲಲ್ಲಾ
Published : Jan 23, 2024, 10:38 AM IST
ಅಯೋಧ್ಯೆ(ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಿನ್ನೆ ಸಂಪನ್ನಗೊಂಡಿದೆ. ಇಂದಿನಿಂದ ಭವ್ಯ ರಾಮಮಂದಿರ ಸಾರ್ವಜನಿಕರಿಗೆ ಮುಕ್ತವಾಗಿದೆ. ಶ್ರೀರಾಮನಿಗೆ ಪ್ರಾರ್ಥನೆ ಸಲ್ಲಿಸಲು ರಾಮಮಂದಿರಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.
ದೇವಾಲಯದ ಮುಖ್ಯದ್ವಾರದಲ್ಲಿ ಇಂದು ಬೆಳಿಗ್ಗೆ 3 ಗಂಟೆಯಿಂದಲೇ ಭಕ್ತರು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಅಯೋಧ್ಯೆ ಸುತ್ತಮುತ್ತ ಎಲ್ಲೇ ಕಣ್ಣು ಹಾಯಿಸಿದರೂ ಕೇಸರಿ ಬಣ್ಣದ ಶ್ರೀರಾಮ, ಹನುಮಂತನ ಧ್ವಜಗಳು ರಾರಾಜಿಸುತ್ತಿವೆ. ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಭಕ್ತರು ರಾಮನ ದರ್ಶನಕ್ಕೆ ಆಗಮಿಸಿ ದ್ವಾರದ ಮುಂದೆ ಕಾಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಇಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದು ಪೊಲೀಸ್ ಭದ್ರತೆ ಕೂಡ ಹೆಚ್ಚಿಸಲಾಗಿದೆ. ಅಧಿಕ ಸಂಖ್ಯೆಯಲ್ಲಿ ಜನರು ಜಮಾಯಿಸಿರುವುದರಿಂದ ಕಾಲ್ತುಳಿತ ಉಂಟಾಗುವ ಸಾಧ್ಯತೆ ಇದ್ದು ಅಗತ್ಯವಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ದೇಶದ ಮೂಲೆ ಮೂಲೆಗಳಿಂದ ಆಗಮಿಸಿರುವ ರಾಮನ ಭಕ್ತರು ಬಾಲರಾಮನ ದರ್ಶನ ಮಾಡಿ ಪುನೀತರಾಗುತ್ತಿದ್ದಾರೆ.
ಸೋಮವಾರ ಮಧ್ಯಾಹ್ನ 12.29ರ ಶುಭ ಮುಹೂರ್ತದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಅತ್ಯಂತ ವೈಭವದಿಂದ ನೆರವೇರಿದೆ. ಈ ಸಂದರ್ಭದಲ್ಲಿ ಗಣ್ಯಾತಿಗಣ್ಯರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಕೋಟ್ಯಂತರ ಜನರ ಕನಸು ಸಾಕಾರ; ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾದ ಶ್ರೀರಾಮ