75ನೇ ಗಣರಾಜ್ಯೋತ್ಸವದ ಪರೇಡ್ನಲ್ಲಿ ಭಾಗಿಯಾಗಿ ದಾವಣಗೆರೆಗೆ ಮರಳಿದ ವಿದ್ಯಾರ್ಥಿಗಳಿಗೆ ಅದ್ದೂರಿ ಸ್ವಾಗತ
Published : Jan 31, 2024, 5:18 PM IST
ದಾವಣಗೆರೆ : 75ನೇ ಗಣರಾಜ್ಯೋತ್ಸವದ ಪರೇಡ್ನಲ್ಲಿ ಭಾಗಿಯಾದ ವಿದ್ಯಾರ್ಥಿಗಳಿಗೆ ದಾವಣಗೆರೆಯಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ದೆಹಲಿಯ ರಾಜಪಥದಲ್ಲಿ ಭಾಗಿಯಾದ ವಿದ್ಯಾರ್ಥಿಗಳಿಗೆ ಎಜು ಏಷ್ಯಾ ಶಾಲೆಯ ಮಕ್ಕಳಿಂದ ಅದ್ದೂರಿ ಸ್ವಾಗತ ಕೋರಲಾಯಿತು.
ದೆಹಲಿಯಿಂದ ದಾವಣಗೆರೆ ರೈಲ್ವೆ ನಿಲ್ದಾಣಕ್ಕಾಗಮಿಸಿದ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರು ಆರತಿ ಬೆಳಗಿ ಹೂವು ಚೆಲ್ಲಿ, ನಾಸೀಕ್ ಡೋಲ್ ಬಾರಿಸುವ ಮೂಲಕ ಭರ್ಜರಿಯಾಗಿ ಬರಮಾಡಿಕೊಂಡರು. ಗಣರಾಜ್ಯೋತ್ಸವ ದಿನದಂದು ರಾಜ್ಯದ ಸಂಸ್ಕೃತಿ ಬಿಂಬಿಸುವ ವೀರಗಾಸೆ ಕಲಾ ನೃತ್ಯದಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಕರ್ತವ್ಯ ಪಥದಲ್ಲಿ ನಡೆದಿದ್ದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಒಂದು ತಿಂಗಳ ಕಾಲ ಅಲ್ಲೇ ಇದ್ದು, ತಮ್ಮ ಕಲೆ ಅನಾವರಣ ಮಾಡಿದ್ರು. ಇನ್ನು ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ಗಣ್ಯಾತಿಗಣ್ಯರ ಮುಂದೆ ನೃತ್ಯದ ಮೂಲಕ ವಿದ್ಯಾರ್ಥಿಗಳು ರಾಜ್ಯದ ಸಂಸ್ಕೃತಿ ಬಿಂಬಿಸಿದ್ದರು. ಎಜು ಏಷ್ಯಾ ಶಾಲೆ ಹಾಗೂ ಕಾಲೇಜಿನ ಒಟ್ಟು 17 ವಿದ್ಯಾರ್ಥಿಗಳು ಈ ವೀರಗಾಸೆ ನೃತ್ಯದಲ್ಲಿ ಭಾಗಿಯಾಗಿದ್ದರು.
ಇಟ್ಟು 25 ದಿನಗಳ ನಂತರ ದಾವಣಗೆರೆಗೆ ಆಗಮಿಸಿದ ವಿದ್ಯಾರ್ಥಿಗಳು ಕರ್ತವ್ಯ ಪಥದಲ್ಲಿ ಕಾರ್ಯಕ್ರಮ ನೀಡಿದ ಸಂಭ್ರಮ ವ್ಯಕ್ತಪಡಿಸಿದರು. ವೀರಗಾಸೆ ನೃತ್ಯದ ಮೂಲಕ ರಾಜ್ಯದ ಕೀರ್ತಿ ಪತಾಕೆಯನ್ನು ದೆಹಲಿಯಲ್ಲಿ ಸಾರಿದ ವಿದ್ಯಾರ್ಥಿಗಳ ಪರ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.