ಶ್ರಮಿಕ್ ಎಕ್ಸ್‌ಪ್ರೆಸ್‌ನಲ್ಲಿ ಅಗ್ನಿ ಶಾಮಕ ಸಾಧನ ಸ್ಫೋಟ: ಆರ್‌ಪಿಎಫ್ ಯೋಧ ಸಾವು - Fire Extinguisher Blast - FIRE EXTINGUISHER BLAST
Published : Apr 22, 2024, 1:42 PM IST
ಮುಜಾಫರ್‌ಪುರ (ಬಿಹಾರ): ಸೋಮವಾರ ಬೆಳಗ್ಗೆ ವಲ್ಸಾದ್‌ನಿಂದ ಮುಜಾಫರ್‌ಪುರಕ್ಕೆ ಬರುತ್ತಿದ್ದ ಶ್ರಮಿಕ್ ಎಕ್ಸ್‌ಪ್ರೆಸ್‌ನಲ್ಲಿ ಅಗ್ನಿಶಾಮಕ ಸಾಧನವೊಂದು ಸ್ಫೋಟಗೊಂಡಿದೆ. ಈ ದುರ್ಘಟನೆಯಲ್ಲಿ ಓರ್ವ ಆರ್‌ಪಿಎಫ್ ಯೋಧ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮುಜಾಫರ್‌ಪುರ ಜಂಕ್ಷನ್‌ನಲ್ಲಿ ನಿಂತಿದ್ದ ಶ್ರಮಿಕ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ.
ಅಪಘಾತದ ಸಮಯದಲ್ಲಿ ರೈಲಿನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ರೈಲು ಸಮಯಕ್ಕೆ ಸರಿಯಾಗಿ ಮುಜಾಫರ್‌ಪುರ ಜಂಕ್ಷನ್‌ಗೆ ತಲುಪಿತ್ತು. ಈ ಸಮಯದಲ್ಲಿ ರೈಲಿನ ಎಸ್- 8 ಬೋಗಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡು ಮಾಹಿತಿ ಪಡೆದ ಆರ್‌ಪಿಎಫ್ ಯೋಧ ವಿನೋದ್ ದಾಸ್ ಸ್ಥಳಕ್ಕೆ ಆಗಮಿಸಿ ಬೋಗಿಯಲ್ಲಿ ಅಳವಡಿಸಲಾಗಿದ್ದ ಅಗ್ನಿಶಾಮಕ ಸಾಧನದಿಂದ ಬೆಂಕಿ ನಂದಿಸಲು ಯತ್ನಿಸಿದರು. ಈ ವೇಳೆ ಅಗ್ನಿಶಾಮಕ ಸಾಧನವು ಸ್ಫೋಟಗೊಂಡು ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಮೃತಪಟ್ಟಿದ್ದರು. ಘಟನೆಯ ನಂತರ, ಆರ್‌ಪಿಎಫ್, ಜಿಆರ್‌ಪಿ, ಸ್ಟೇಷನ್ ಮಾಸ್ಟರ್ ಅಖಿಲೇಶ್ ಸಿಂಗ್, ಸ್ಟೇಷನ್ ಡೈರೆಕ್ಟರ್ ಮತ್ತು ಇತರ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಆರಂಭಿಸಲಾಗಿದೆ.
ಘಟನೆ ಕುರಿತು ಆರ್ ಪಿಎಫ್ ಇನ್ಸ್ಪೆಕ್ಟರ್ ಮನೀಶ್ ಕುಮಾರ್ ಮಾತನಾಡಿ, ‘‘ರೈಲು ಜಂಕ್ಷನ್ ನ ಫ್ಲಾಟ್ ಫಾರಂ ಸಂಖ್ಯೆ 5ಕ್ಕೆ ತಲುಪಿದ್ದು, ಆರ್‌ಪಿಎಫ್ ಯೋಧ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಷ್ಟರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಹೊಗೆ ಬರುತ್ತಿರುವುದನ್ನು ಕಂಡ ಯೋಧ ಅದನ್ನು ನಂದಿಸಲು ಯತ್ನಿಸಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಅಗ್ನಿಶಾಮಕ ಸಾಧನ ಸ್ಫೋಟಗೊಂಡಿದೆ. ಘಟನೆಯಲ್ಲಿ ಯೋಧ ಮೃತಪಟ್ಟಿದ್ದು, ಆತನ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.
''ಆರ್‌ಪಿಎಫ್ ಯೋಧನ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಎಫ್‌ಎಸ್‌ಎಲ್ ತಂಡವನ್ನು ಸಹ ಸ್ಥಳಕ್ಕೆ ಕರೆಸಲಾಗಿದೆ. ಪ್ರಸ್ತುತ ತಂಡದಿಂದ ತನಿಖೆ ನಡೆಸಲಾಗುತ್ತಿದೆ" ಎಂದು ಎಸ್‌ಎಚ್‌ಒ, ಜಿಆರ್‌ಪಿ ರಂಜಿತ್ ಕುಮಾರ್ ಮಾಹಿತಿ ನೀಡಿದರು.
ಇದನ್ನೂ ಓದಿ: 15 ಅಡಿ ಎತ್ತರದ ಸ್ಮಶಾನದ ಗೋಡೆ ದಿಢೀರ್ ಕುಸಿದು ನಾಲ್ವರು ಸಾವು: ಭಯಾನಕ ವಿಡಿಯೋ - Cemetery Wall Collapsed