ಫೆಂಗಲ್ ಚಂಡಮಾರುತದ ಅಬ್ಬರ : ಉತ್ತರಕನ್ನಡದಲ್ಲಿ ಲಂಗರು ಹಾಕಿದ ಮೀನುಗಾರಿಕಾ ಬೋಟುಗಳು
Published : Dec 3, 2024, 5:45 PM IST
ಕಾರವಾರ (ಉತ್ತರ ಕನ್ನಡ) : ಫೆಂಗಲ್ ಚಂಡಮಾರುತದ ಅಬ್ಬರ ಉತ್ತರಕನ್ನಡ ಜಿಲ್ಲೆಗೂ ತಟ್ಟಿದೆ. ಪರಿಣಾಮ ಜಿಲ್ಲೆಯ ಕರಾವಳಿ ಸೇರಿದಂತೆ ಘಟ್ಟದ ಮೇಲಿನ ತಾಲೂಕುಗಳಲ್ಲೂ ಸಾಧಾರಣದಿಂದ ತುಂತುರು ಮಳೆ ಸುರಿಯುತ್ತಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆ ಮೀನುಗಾರಿಕೆಗೆ ನಿಷೇಧ ಹೇರಿದ್ದು, ಬೋಟುಗಳು ಇದೀಗ ಲಂಗರು ಹಾಕತೊಡಗಿವೆ.
ಕರಾವಳಿಯಲ್ಲಿ ಎರಡು ದಿನಗಳ ಕಾಲ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಉಡುಪಿ, ಮಂಗಳೂರು ಭಾಗದಲ್ಲಿ ನಿನ್ನೆ ಸಂಜೆಯಿಂದಲೇ ಮಳೆಯ ಅಬ್ಬರ ಆರಂಭವಾಗಿದ್ದರೆ, ಕಾರವಾರ ಭಾಗದಲ್ಲಿ ರಾತ್ರಿಯಿಡೀ ಮಳೆ ಸುರಿದಿದೆ. ಫೆಂಗಲ್ ಚಂಡಮಾರುತದ ಹಿನ್ನೆಲೆ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ಇರುವ ಕಾರಣ, ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ.
ಆಳ ಸಮುದ್ರದಲ್ಲಿ ಗಾಳಿ ಮಳೆಯಾಗುವ ಸಾಧ್ಯತೆ ಹಿನ್ನೆಲೆ ಬೋಟ್ಗಳು ಇದೀಗ ಹತ್ತಿರದ ಬಂದರುಗಳಿಗೆ ತೆರಳಿ ಲಂಗರು ಹಾಕುತ್ತಿವೆ. ಕಾರವಾರದ ಬೈತಖೋಲ ಬಂದರಿನಲ್ಲಿಯೂ ಕೇರಳ, ತಮಿಳುನಾಡು ಭಾಗ ಸೇರಿದಂತೆ ಇತರೆ ನೂರಾರು ಮೀನುಗಾರಿಕಾ ಬೋಟುಗಳು ಲಂಗರು ಹಾಕಿ ನಿಂತಿವೆ. ಹವಾಮಾನ ವೈಪರೀತ್ಯದ ಹಿನ್ನೆಲೆ ಸ್ವತಃ ಮೀನುಗಾರರೇ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿದ್ದಾರೆ.
ಇದನ್ನೂ ಓದಿ : ಫೆಂಗಲ್ ಚಂಡಮಾರುತ: ದ.ಕನ್ನಡಕ್ಕೆ ಆರೆಂಜ್ ಅಲರ್ಟ್, ನಾಳೆ ಶಾಲಾ-ಕಾಲೇಜಿಗೆ ರಜೆ; ಮೀನುಗಾರಿಕೆಗೆ ತೆರಳದಂತೆ ಸೂಚನೆ