ಕರ್ನಾಟಕ

karnataka

ETV Bharat / videos

ತೆಲಂಗಾಣದ ಜಡಚರ್ಲ ಬಳಿ ಭೀಕರ ಅಪಘಾತ: ಡಿಸಿಎಂ ವ್ಯಾನ್​ಗೆ ಡಿಕ್ಕಿ ಹೊಡೆದ ಬಸ್​ಗೆ ತಗುಲಿದ ಬೆಂಕಿ - Fatal accident near Jadcharla - FATAL ACCIDENT NEAR JADCHARLA

By ETV Bharat Karnataka Team

Published : Jul 15, 2024, 1:30 PM IST

ಜಡಚರ್ಲ (ತೆಲಂಗಾಣ): ರಾಷ್ಟ್ರೀಯ ಹೆದ್ದಾರಿ - 44ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಎಪಿಎಸ್​ಆರ್​ಟಿಸಿ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಭಾನುವಾರ ತಡರಾತ್ರಿ 1.45ರ ಸುಮಾರಿಗೆ ತೆಲಂಗಾಣ ರಾಜ್ಯದ ಮಹೆಬೂಬ್‌ನಗರ ಜಿಲ್ಲೆಯ ಜಡಚರ್ಲ ಮಂಡಲದ ಬುರೆಡ್ಡಿಪಲ್ಲಿ ಬಳಿ ಈ ಘಟನೆ ನಡೆದಿದೆ. ಆಂಧ್ರಪ್ರದೇಶದ ಶ್ರೀಸತ್ಯಸಾಯಿ ಜಿಲ್ಲೆಯ ಧರ್ಮಾವರಂ ಎಪಿಎಸ್​ಆರ್​ಟಿಸಿ ಡಿಪೋಗೆ ಸೇರಿದ ಐಷಾರಾಮಿ ಬಸ್ ಹೈದರಾಬಾದ್‌ನ ಎಂಜಿಬಿಎಸ್‌ನಿಂದ ಭಾನುವಾರ ಮಧ್ಯರಾತ್ರಿ ಪ್ರಯಾಣಿಕರೊಂದಿಗೆ ಹೊರಟಿದೆ.

ಜಡಚರ್ಲ ಮಂಡಲ ಬುರೆಡ್ಡಿಪಲ್ಲಿ ತಿರುವು ತಲುಪುತ್ತಿದ್ದಂತೆಯೇ ಡಿಸಿಎಂ ಸರಕು ಸಾಗಣೆ ವಾಹನ ಯು ಟರ್ನ್ ತೆಗೆದುಕೊಂಡಿದೆ. ಈ ಸಂದರ್ಭದಲ್ಲಿ ಸರ್ಕಾರಿ ಬಸ್ ಹಾಗೂ ಡಿಸಿಎಂ ವ್ಯಾನ್​ ಮಧ್ಯೆ ಡಿಕ್ಕಿ ಸಂಭವಿಸಿದೆ. ಬಸ್ ನಿಯಂತ್ರಣ ತಪ್ಪಿ ಬಲಬದಿಯ ರಸ್ತೆಗೆ ಉರುಳಿದೆ. ಚಾಲಕ ಮತ್ತು ಹಲವಾರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉಳಿದ ಪ್ರಯಾಣಿಕರು ಎಚ್ಚೆತ್ತು ಗಾಜುಗಳನ್ನು ಒಡೆದು ಹೊರಬಂದರು.

ಗಂಭೀರವಾಗಿ ಗಾಯಗೊಂಡವರನ್ನು ರಕ್ಷಿಸಲು ಪ್ರಯತ್ನಿಸಲಾಯಿತು. ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಅಷ್ಟರಲ್ಲಿ ಬಸ್​​ನಲ್ಲಿ ಬೆಂಕಿ ಹೊತ್ತಿಕೊಂಡಿತು. ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿಯನ್ನು ನಿಯಂತ್ರಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. 2.30ರ ವೇಳೆಗೆ ಬಸ್ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಗಾಯಗೊಂಡವರನ್ನು ಮಹಬೂಬ್‌ನಗರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.  

ಲಕ್ಷ್ಮೀದೇವಿ (ಅನಂತಪುರಂ), ಸಂಜೀವ (ಅನಂತಪುರಂ), ಮೋಹನ್ (ಕೂಕಟ್ಪಲ್ಲಿ, ಹೈದರಾಬಾದ್), ಮೈಥಿಲಿ (ಹೈದರಾಬಾದ್), ಕಾರ್ತಿಕ್ (ನಂದ್ಯಾಲ), ದಸ್ತಗಿರಿ (ನಂದ್ಯಾಲ), ಹೀರಾಲಾಲ್ (ಕೋಠಿ, ಹೈದರಾಬಾದ್), ಅರ್ಚನಾ (ನಾಚರಂ, ಹೈದರಾಬಾದ್), ಸುನೀಲ್ (ಅನಂತಪುರಂ ), ಗಾಯತ್ರಿ (ಅನಂತಪುರಂ) ಮತ್ತು ಇತರ ಕೆಲವು ಪ್ರಯಾಣಿಕರು ಚಿಕಿತ್ಸೆ ಪಡೆಯುತ್ತಿದ್ದಾರೆ. 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಹಾಗೂ 108 ಸಿಬ್ಬಂದಿ ತಿಳಿಸಿದ್ದಾರೆ. ಬಸ್ ಡಿಕ್ಕಿ ಹೊಡೆದ ಸ್ಥಳದಲ್ಲಿ ವಿದ್ಯುತ್ ತಂತಿಗಳು ಬಿದ್ದಿದ್ದವು. ಆದರೆ ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಇದನ್ನೂ ಓದಿ: ಇನ್ಮುಂದೆ ಸ್ಕ್ರ್ಯಾಪ್ ಆಗಲಿವೆ 15 ವರ್ಷ ಹಳೆಯ ವಾಹನಗಳು: ಏನಿದು ಹೊಸ ನೀತಿ? ಇಲ್ಲಿದೆ ಫುಲ್​ ಡೀಟೇಲ್ಸ್​ - HOW TO WORK VEHICLE SCRAP POLICY

ABOUT THE AUTHOR

...view details