ಕರ್ನಾಟಕ

karnataka

ETV Bharat / videos

ಹಾವೇರಿ: ಸತತ ಮಳೆಗೆ ಬ್ಯಾರೇಜ್​ ಮುಳುಗಡೆ, ನೀರಿನಲ್ಲಿ ತೇಲಿ ಹೋದ ಕುಂಬಳಕಾಯಿ!

By ETV Bharat Karnataka Team

Published : 4 hours ago

ಹಾವೇರಿ: ಸವಣೂರು ತಾಲೂಕಿನ ಕಳಸೂರು ಗ್ರಾಮದ ಬಳಿ ಅಧಿಕ ಮಳೆಗೆ ವರದಾ ನದಿಗೆ ಕಟ್ಟಿರುವ ಬ್ರಿಡ್ಜ್ ಕಂ ಬ್ಯಾರೇಜ್​ ಮುಳುಗಡೆಯಾಗಿದೆ. ಇತ್ತ ರಾಣೆಬೆನ್ನೂರು ನಗರದಲ್ಲಿ ಎರಡು ಗಂಟೆಗಳ ಕಾಲ ಸುರಿದ ಮಳೆಗೆ ಆಯುಧ ಪೂಜೆ ಸಿದ್ಧತೆಗೆ ತಂದಿದ್ದ ಕುಂಬಳಕಾಯಿ, ಬಾಳೆಗಿಡ, ತಳಿರು ತೋರಣ, ಹೂಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗಿವೆ. 

ಮಳೆಯ ನೀರಲ್ಲಿ ತೇಲಿ ಹೋಗುತ್ತಿರುವ ಕುಂಬಳಕಾಯಿಗಳನ್ನು ವ್ಯಾಪಾರಸ್ಥರು ಹಿಡಿಯಲು ಹರಸಾಹಸಪಟ್ಟರು. ಮೊಣಕಾಲಿನವರೆಗೆ ಮಳೆ ನೀರು ನಿಂತು ಆಯುಧ ಪೂಜೆ ಸಿದ್ಧತೆಯ ಸಂಭ್ರಮಕ್ಕೆ ತಣ್ಣೀರೆರೆಚಿತು. ಮಳೆಯ ಆರ್ಭಟಕ್ಕೆ ಎಂ.ಜಿ. ರಸ್ತೆಯಲ್ಲಿ ಚರಂಡಿಯೂ ಸಂಪೂರ್ಣ ತುಂಬಿದ್ದರಿಂದ ರಸ್ತೆಯ ಮೇಲೆ ಐದು ಅಡಿಯಷ್ಟು ನೀರು ನಿಂತು ವಾಹನ ಸವಾರರು ಪರದಾಡಿದರು. 

ಬುಧವಾರ, ಗುರುವಾರ 2 ದಿನವೂ ಹಾವೇರಿ ಜಿಲ್ಲೆಯಲ್ಲಿ ಸಂಜೆಯಾಗುತ್ತಿದ್ದಂತೆ ಮಳೆಯಾಗುತ್ತಿದೆ. ಈ ಮಳೆಯಿಂದಾಗಿ ವರದಾ ನದಿಗೆ ಕಟ್ಟಿರುವ ಬ್ರಿಜ್ಡ್ ಕಂ ಬ್ಯಾರೇಜ್ ಮುಳುಗಡೆಯಾಗಿ ಕಳಸೂರು, ಕೋಳೂರು ಗ್ರಾಮದ ದೇವಗಿರಿಯ ಸಂಪರ್ಕ ಸೇತುವೆ ಬಂದಾಗಿದೆ.  ಜನರು ಪರ್ಯಾಯ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ. 

ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಶೇಂಗಾ, ಸೋಯಾಬಿನ್, ಮೆಕ್ಕೆಜೋಳ, ಹತ್ತಿ ಸೇರಿದಂತೆ ವಿವಿಧ ಬೆಳೆಗಳು ಹಾಳಾಗಿವೆ. "ಈ ವರ್ಷ ಎರಡನೇ ಬಾರಿ ಈ ರೀತಿ ಸೇತುವೆ ಮುಳುಗಡೆಯಾಗುತ್ತಿದೆ. ಪ್ರತಿವರ್ಷ ಮಳೆಗಾಲ ಬಂದರೆ ಸಾಕು ನಾವು ಆತಂಕದಲ್ಲಿ ದಿನದೂಡಬೇಕಾಗುತ್ತದೆ. ಹಲವು ಬಾರಿ ಮನವಿ ನೀಡಿದರು ಬ್ಯಾರೇಜ್ ಸೇತುವೆ ಎತ್ತರ ಎರಿಸುತ್ತಿಲ್ಲ" ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ಭಾರಿ ಮಳೆಗೆ ರೈಲ್ವೆ ಕೆಳಸೇತುವೆಯಲ್ಲಿ ಮುಳುಗಿದ ಟ್ರ್ಯಾಕ್ಟರ್‌: 10 ಜನರ ರಕ್ಷಣೆ

ABOUT THE AUTHOR

...view details