ಹುಬ್ಬಳ್ಳಿಯ ಈಶ್ವರ ದೇವಸ್ಥಾನ, ಸಿದ್ದಾರೂಢ ಮಠದಲ್ಲಿ ಶಿವರಾತ್ರಿ ವಿಶೇಷ ಪೂಜೆ
Published : Mar 8, 2024, 1:18 PM IST
ಹುಬ್ಬಳ್ಳಿ: ಇಂದು ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ದೇಶಾದ್ಯಂತ ಭಕ್ತರು ಶಿವನ ಜಪ ಮಾಡುತ್ತಿದ್ದಾರೆ. ಅದರಂತೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಸಂಭ್ರಮ ಮನೆ ಮಾಡಿದೆ. ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಈಶ್ವರ ದೇವಸ್ಥಾನಕ್ಕೆ ಭಕ್ತರು ಬೆಳಗ್ಗೆಯಿಂದಲೇ ಆಗಮಿಸುತ್ತಿದ್ದಾರೆ.
ಈ ದೇವಾಲಯ ಪೌರಾಣಿಕ ಹಿನ್ನೆಲೆ ಹೊಂದಿದ್ದು, ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿದೆ. ವರನಟ ಡಾ.ರಾಜ್‌ಕುಮಾರ್ ಅವರು ವೃತ್ತಿ ರಂಗಭೂಮಿಯನ್ನು ಇದೇ ಈಶ್ವರ ದೇವಸ್ಥಾನದ ಮೂಲಕ ಆರಂಭಿಸಿದ್ದರಂತೆ. ಹುಬ್ಬಳ್ಳಿಗೆ ಬಂದಾಗ ಇದೇ ದೇವಸ್ಥಾನದಲ್ಲಿ ಡಾ.ರಾಜ್‌ಕುಮಾರ್ ವಿಶ್ರಾಂತಿ ಪಡೆದಿದ್ದರಂತೆ.
ಇಂದು ಬೆಳಗ್ಗೆಯಿಂದಲೇ ನಿರಂತರ ರುದ್ರಾಭಿಷೇಕ, ಹಾಲಿನ ಅಭಿಷೇಕ, ಎಳನೀರು ಅಭಿಷೇಕ, ಜಲಾಭಿಷೇಕವನ್ನು ಅರ್ಚಕರು ನೆರವೇರಿಸುತ್ತಿದ್ದಾರೆ. ಮಹಿಳೆಯರು ತಮ್ಮ ಮಕ್ಕಳು ಮತ್ತು ಕುಟುಂಬ ಸಮೇತರಾಗಿ ಬಂದು ಈಶ್ವರನ ದರ್ಶನ ಪಡೆದು ಹಾಲು, ತುಪ್ಪ, ಬಿಲ್ವಪತ್ರೆ ಅರ್ಪಿಸುತ್ತಿದ್ದಾರೆ.
ಇನ್ನೊಂದೆಡೆ, ಸಿದ್ದಾರೂಢ ಮಠದಲ್ಲೂ ಕೂಡ ಶಿವರಾತ್ರಿ ಪ್ರಯುಕ್ತ ಭಕ್ತರ ಸಂಖ್ಯೆ ಹೆಚ್ಚಿದೆ. ಸರತಿ ಸಾಲಿನಲ್ಲಿ ನಿಂತು ಸಿದ್ದಾರೂಢರು ಹಾಗೂ ಗುರುನಾಥರೂಢರ ಗದ್ದುಗೆ ದರ್ಶನ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಮಹಿಳಾ ದಿನಕ್ಕೆ ಪ್ರಧಾನಿ ಮೋದಿ ಗಿಫ್ಟ್! ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ₹100 ಇಳಿಕೆ