ಧರೆಗುರುಳಿದ ಭಾರಿ ಗಾತ್ರದ ಆಲದ ಮರ: ರಸ್ತೆ ಸಂಚಾರ ಸಂಪೂರ್ಣ ಸ್ಥಗಿತ - Rain In Chikkamagaluru - RAIN IN CHIKKAMAGALURU
Published : Jul 5, 2024, 7:37 PM IST
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಅವಾಂತರ ಮುಂದುವರಿದಿದ್ದು, ಬಿರುಗಾಳಿಗೆ ಬೃಹತ್ ಗಾತ್ರದ ಆಲದ ಮರವೊಂದು ಧರೆಗುರುಳಿದೆ. ಪರಿಣಾಮ ಜಿಲ್ಲೆಯ ಕಳಸ-ಹಳುವಳ್ಳಿ-ಹೊರನಾಡು ಸಂಪರ್ಕ ಸ್ಥಗಿತಗೊಂಡಿತ್ತು. ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ವಾಹನ ಸವಾರರು ಕೆಲವು ಗಂಟೆಗಳ ಕಾಲ ಪರದಾಟ ನಡೆಸಿದ ಘಟನೆ ಕೂಡ ನಡೆಯಿತು.
ಹರಸಾಹಸದ ಬಳಿಕ ಆಲದ ಮರವನ್ನು ತೆರವುಗೊಳಿಸಲಾಯಿತು. ಬಿಟ್ಟು ಬಿಡದೇ ಮಳೆ ಸುರಿಯುತ್ತಿರುವುದರಿಂದ ಕಳಸ ತಾಲೂಕಿನ ಹಳುವಳ್ಳಿ ಗ್ರಾಮ ಸೇರಿದಂತೆ ಹಲವು ಭಾಗದಲ್ಲಿ ಇದೇ ರೀತಿಯ ಆವಾಂತರ ಸೃಷ್ಟಿಯಾಗಿವೆ. ಕಾಡಂಚಿನ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹತ್ತಾರು ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಗುರುವಾರ ರಾತ್ರಿ ಶೃಂಗೇರಿಯ ಕೆರೆಕಟ್ಟೆ ಘಟ್ಟ ಪ್ರದೇಶದಲ್ಲಿ ಜೋರು ಮಳೆಯಾಗಿದ್ದು, ತುಂಗಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ನಿರಂತರ ಮಳೆಗೆ ಕಳಸ ತಾಲೂಕಿನ ಕಂಚಿಗಾನೆಯಲ್ಲಿ ತಡೆಗೋಡೆ ಕುಸಿದುಬಿದ್ದಿದ್ದು, ಜೀಪ್ ಹಾಗೂ ಮೇಲ್ಛಾವಣಿಗೆ ಸಂಪೂರ್ಣವಾಗಿ ಹಾನಿಯಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ರಭಸವಾಗಿ ಬೀಸುತ್ತಿರುವ ಗಾಳಿಯಿಂದ ಅವಘಡಗಳು ಜರುಗುತ್ತಿದ್ದು, ಕಾಡಂಚಿನ ಪ್ರದೇಶ ಹಾಗೂ ಗುಡ್ಡಗಾಡಿನ ಜನರು ಎಚ್ಚರಿಕೆಯಿಂದ ಇರುವಂತೆ ಸ್ಥಳೀಯ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಚಾರ್ಮಡಿ ಘಾಟ್ ರಸ್ತೆಯಲ್ಲಿ ಬಿರುಕು: ತುಂಗಾ ನದಿಯಲ್ಲಿ ಭಾರೀ ಪ್ರಮಾಣದ ನೀರು - Charmadi Ghat