ಚಿಕ್ಕಬಳ್ಳಾಪುರ: ಐದು ವರ್ಷದ ಬಾಲಕನಿಂದ ಸಂವಿಧಾನ ಪೀಠಿಕೆ ಬೋಧನೆ
Published : Feb 23, 2024, 6:58 PM IST
ಚಿಕ್ಕಬಳ್ಳಾಪುರ: ಐದರ ಬಾಲಕನೋರ್ವ ಸಂವಿಧಾನ ಪೀಠಿಕೆಯನ್ನು ಸರಾಗವಾಗಿ ಹೇಳುವುದರ ಮೂಲಕ ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನಲ್ಲಿ ಶುಕ್ರವಾರ ನಡೆದಿದೆ.
ತಾಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರ ಮೆರವಣಿಗೆ ನಡೆದಿದ್ದು, ಸಂವಿಧಾನ ಜಾಗೃತಿ ಜಾಥಾ ರಥವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ಇನ್ನೂ ಇದೇ ಕಾರ್ಯಕ್ರಮದಲ್ಲಿ ಐದು ವರ್ಷದ ಬಾಲಕನೋರ್ವ ಸಂವಿಧಾನ ಪೀಠಿಕೆಯನ್ನು ಬೋಧಿಸಿ ಎಲ್ಲರ ಗಮನವನ್ನು ಸೆಳೆದಿದ್ದಾನೆ. ಕೇವಲ ಮೂರು ದಿನಗಳಲ್ಲಿ ಸಂವಿಧಾನ ಪೀಠಿಕೆಯನ್ನು ಕಂಠಪಾಠ ಮಾಡಿ ಕಾರ್ಯಕ್ರಮದಲ್ಲಿ ಬೋಧಿಸುವುದರ ಮೂಲಕ ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾನೆ.
ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಅಧಿಕಾರಿಗಳು ಸಂವಿಧಾನ ಪೀಠಿಕೆ ಪ್ರತಿ ನೋಡಿಕೊಂಡು ಬೋಧನೆ ನೀಡಿದರೆ ಅಂಗನವಾಡಿ ಬಾಲಕ ಅನ್ವಿಥ್ ಕುಮಾರ್ ಸಂವಿಧಾನ ಪೀಠಿಕೆಯನ್ನು ಬೋಧಿಸಿದನು. ಅನ್ವಿಥ್ ಕುಮಾರ್ ಚೊಕ್ಕನಹಳ್ಳಿ ಗ್ರಾಮದ ವೆಂಕಟಲಕ್ಷ್ಮಿ ಅವರ ಮಗ. ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡಿರುವ ಈ ಬಾಲಕ ಯಾವುದೇ ವಿಷಯವನ್ನು ಕೆಲವೇ ಗಂಟೆಗಳಲ್ಲಿ ಕಲಿತು ಸರಾಗವಾಗಿ ಹೇಳುವುದರಲ್ಲಿ ನಿಸ್ಸಿಮನಾಗಿದ್ದಾನೆ.
ಅಷ್ಟೇ ಅಲ್ಲದೇ ಈ ತಿಮ್ಮಸಂದ್ರ ಗ್ರಾಪಂ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 6 ವರ್ಷದ ಇಬ್ಬರು ಬಾಲಕಿಯರು ಇಂಗ್ಲೀಷ್ ಹಾಗೂ ಕನ್ನಡದಲ್ಲಿ ಸಂವಿಧಾನ ಪೀಠಿಕೆ ಬೋಧನೆ ಮಾಡುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಶೆಟ್ಟಿಕೆರೆ ಗ್ರಾಮದ ಸರ್ಕಾರಿ ಶಾಲೆಯ 6 ವರ್ಷದ ವೈಷ್ಟವಿ ಎಸ್ ವಿ ಕನ್ನಡದಲ್ಲಿ ಸಂವಿಧಾನ ಪೀಠಿಕೆ ಬೋಧನೆ ಮಾಡಿದರೆ, ಈ ತಿಮ್ಮಸಂದ್ರ ಗ್ರಾಮದ 6 ವರ್ಷದ ಟಿ ಎಸ್ ವೈಷ್ಣವಿ ಇಂಗ್ಲೀಷ್ನಲ್ಲಿ ಸಂವಿಧಾನ ಪೀಠಿಕೆ ಬೋಧಿಸಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.
ಇದನ್ನೂ ನೋಡಿ: 1,35,000 ಖಾಲಿ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಮೂಡಿಬಂದ 'ನಮ್ಮ ಸಂವಿಧಾನ'