LIVE: ಹಾಸನದಲ್ಲಿ ಜನಕಲ್ಯಾಣ ಸಮಾವೇಶ, ದಳಪತಿಗಳ ಕೋಟೆಯಲ್ಲಿ 'ಕೈ' ಶಕ್ತಿ ಪ್ರದರ್ಶನ - CONGRESS CONVENTION
Published : Dec 5, 2024, 2:21 PM IST
|Updated : Dec 5, 2024, 3:59 PM IST
ಹಾಸನ: ಹಾಸನದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಜನಕಲ್ಯಾಣ ಸಮಾವೇಶ ನಡೆಯುತ್ತಿದೆ. ಬೃಹತ್ ಕಾರ್ಯಕ್ರಮಕ್ಕೆ ಸುಮಾರು ಒಂದು ಲಕ್ಷ ಜನರು ಸೇರಿದ್ದಾರೆ. ಹಾಸನ ನಗರದ ಹೊರವಲಯದಲ್ಲಿ ನಿರ್ಮಾಣವಾಗಿರುವ ಎಸ್.ಎಂ. ಕೃಷ್ಣ ಕ್ರೀಡಾಂಗಣದಲ್ಲಿ ಸಮಾವೇಶ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಸರ್ಕಾರದ ಸುಮಾರು 20ಕ್ಕೂ ಹೆಚ್ಚು ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಸಮಾವೇಶದ ಭದ್ರತೆಗಾಗಿ ಐವರು ಎಸ್ಪಿ, 6 ಮಂದಿ ಹೆಚ್ಚುವರಿ ಎಸ್ಪಿ, 12 ಡಿವೈಎಸ್ಪಿ, 40 ಇನ್ಸ್ಪೆಕ್ಟರ್ ಮತ್ತು 80 ಪಿಎಸ್ಐಗಳನ್ನು ಒಳಗೊಂಡ ಸುಮಾರು 2,000 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಪೊಲೀಸರನ್ನು ನೆರೆಯ ಜಿಲ್ಲೆಗಳಾದ ಮಂಡ್ಯ, ಮೈಸೂರು ಕೊಡಗಿನಿಂದಲೂ ಕರೆಸಿಕೊಳ್ಳಲಾಗಿದೆ. ವಿವಿಧ ಜಿಲ್ಲೆಗಳಿಂದ ಜನರನ್ನು ಕರೆ ತರಲು ಬಸ್ ವ್ಯವಸ್ಥೆಯನ್ನೂ ಕೂಡ ಮಾಡಲಾಗಿದೆ. ಬೆಂಗಳೂರಿನಿಂದ ಹಾಸನ, ಮಂಗಳೂರು, ಚಿಕ್ಕಮಗಳೂರು, ಮಡಿಕೇರಿ, ಧರ್ಮಸ್ಥಳ ಸೇರಿದಂತೆ ಹೆಚ್ಚುವರಿ ಬಸ್ಗಳನ್ನು ಓಡಿಸಲಾಗುತ್ತಿದೆ. ಅರಸೀಕೆರೆ ಕ್ಷೇತ್ರದಿಂದ ಶಾಸಕ ಕೆ.ಎಂ.ಶಿವಲಿಂಗೇಗೌಡ, ಚನ್ನರಾಯಪಟ್ಟಣ ತಾಲೂಕಿನಿಂದ ಎಂ.ಎ.ಗೋಪಾಲಸ್ವಾಮಿ ನೇತೃತ್ವದಲ್ಲಿ ಸುಮಾರು 30ರಿಂದ 40 ಸಾವಿರ ಜನರನ್ನು ಕರೆತರುವ ನಿಟ್ಟಿನಲ್ಲಿ 100ಕ್ಕೂ ಹೆಚ್ಚು ಬಸ್ ವ್ಯವಸ್ಥೆ ಮಾಡಿದ್ದಾರೆ.
Last Updated : Dec 5, 2024, 3:59 PM IST