ಟೈರ್ ಸ್ಫೋಟಗೊಂಡು ಕಾರು ಏಳೆಂಟು ಬಾರಿ ಪಲ್ಟಿ; ಸೀಟ್ ಬೆಲ್ಟ್‌ನಿಂದ ಪ್ರಯಾಣಿಕರು ಬಚಾವ್
Published : Mar 3, 2024, 8:17 AM IST
ಮಂಡ್ಯ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನ ಆರ್.ಟಿ.ನಗರ ನಿವಾಸಿ ವಿನೋದ್ (46) ಹಾಗೂ ಕಾರಿನ ಚಾಲಕ ಕಾರಿನಲ್ಲಿದ್ದರು ಎಂದು ತಿಳಿದುಬಂದಿದೆ.
ಟೈರ್ ಸ್ಫೋಟಗೊಂಡು ಘಟನೆ: ಜ್ಯುವೆಲ್ಲರಿ ಶಾಪ್ ಮಾಲೀಕರಾದ ವಿನೋದ್, ಚಾಮರಾಜನಗರದ ಕನಕಗಿರಿ ಮಠಕ್ಕೆ ತೆರಳಿ, ವಾಪಸ್ ಬೆಂಗಳೂರಿಗೆ ತೆರಳುತ್ತಿದ್ದರು. ಮದ್ದೂರಿನ ಫ್ಲೈ ಓವರ್ ಇಳಿಯುತ್ತಿದ್ದಂತೆ ಕಾರಿನ ಮುಂಭಾಗದ ಎಡಗಡೆಯ ಟೈರ್ ಸ್ಫೋಟಗೊಂಡಿದೆ. ಇದರಿಂದ ಏಕಾಏಕಿ ನಿಯಂತ್ರಣ ಕಳೆದುಕೊಂಡು 7-8 ಸಲ ಪಲ್ಟಿ ಹೊಡೆದು ಡಿವೈಡರ್ಗೆ ಗುದ್ದಿ ಸಂಪೂರ್ಣ ಜಖಂ ಆಗಿದೆ. ಅಪಘಾತದ ತೀವ್ರತೆಗೆ ವಾಹನದ ಭಾಗಗಳು ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಇತರ ವಾಹನ ಸವಾರರು ಹಾಗೂ ಸ್ಥಳೀಯರು ಧಾವಿಸಿ ಕಾರಿನಲ್ಲಿದ್ದವರನ್ನು ಹೊರತೆಗೆದು ರಕ್ಷಿಸಿದ್ದು, ಆಶ್ಚರ್ಯವೆಂಬಂತೆ ಅವರಿಗೆ ಯಾವುದೇ ಗಾಯಗಳಾಗಿರಲಿಲ್ಲ.
ಸ್ಥಳಕ್ಕೆ ಮದ್ದೂರು ಸಂಚಾರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಜೆ.ಇ.ಮಹೇಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮದ್ದೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಾಣ ಕಾಪಾಡಿದ ಸೀಟ್ ಬೆಲ್ಟ್: ''ಭೀಕರ ಅಪಘಾತವಾದರೂ ಸೀಟ್ ಬೆಲ್ಟ್ ಹಾಕಿರುವ ಕಾರಣ ಪ್ರಯಾಣಿಕರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಸುರಕ್ಷಿತವಾಗಿ ಪ್ರಯಾಣಿಸಿ'' ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಸುಟ್ಟು ಕರಕಲಾದ ಖಾಸಗಿ ಬಸ್, 28 ಪ್ರಯಾಣಿಕರು ಪಾರು