ತುಮಕೂರು-ಬೆಂಗಳೂರು ರೈಲಿಗೆ ಜನ್ಮದಿನ ಸಂಭ್ರಮ: ರೈಲ್ವೆ ಪ್ರಯಾಣಿಕರ ವೇದಿಕೆಯಿಂದ ಹುಟ್ಟುಹಬ್ಬ ಆಚರಣೆ - Birthday celebration of train - BIRTHDAY CELEBRATION OF TRAIN
Published : Aug 3, 2024, 2:54 PM IST
ತುಮಕೂರು: ತುಮಕೂರು- ಬೆಂಗಳೂರು ರೈಲಿಗೆ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಪ್ರತಿನಿತ್ಯ ತುಮಕೂರಿನಿಂದ ಬೆಂಗಳೂರು ನಗರಕ್ಕೆ ಸಂಚರಿಸುವ ರೈಲು 10ನೇ ವರ್ಷ ಪೂರೈಸಿದ ಹಿನ್ನೆಲೆ ರೈಲ್ವೆ ಪ್ರಯಾಣಿಕರ ವೇದಿಕೆ ವತಿಯಿಂದ ವಿಶೇಷವಾಗಿ ರೈಲಿನ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು.
ಹತ್ತು ವರ್ಷಗಳ ಹಿಂದೆ ತುಮಕೂರಿನಿಂದ ಬೆಂಗಳೂರಿಗೆ ತೆರಳಲು ಈ ರೈಲನ್ನು ವ್ಯವಸ್ಥೆ ಮಾಡಲಾಗಿತ್ತು. ಅಂದಿನಿಂದ ಪ್ರತಿವರ್ಷ ರೈಲಿನ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇಂದು (ಶನಿವಾರ) ರೈಲಿಗೆ ಪ್ರಯಾಣಿಕರು ವಿಶೇಷ ಪೂಜೆ ಸಲ್ಲಿಸಿದರು. 10ನೇ ವರ್ಷದ ರೈಲಿನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ರೈಲನ್ನು ತಳಿರುತೋರಣ ಹಾಗೂ ಹೂವಿನಿಂದ ಸಿಂಗರಿಸಲಾಗಿತ್ತು. ಅಲ್ಲದೇ ಪುರೋಹಿತರು ಬಂದು ರೈಲಿಗೆ ಆರತಿ ನೆರವೇರಿಸಿದರು. ಇದೇ ವೇಳೆ ಕೇಕ್ ಕತ್ತರಿಸಿ ಸ್ಥಳದಲ್ಲಿದ್ದ ಪ್ರಯಾಣಿಕರಿಗೆ ಹಂಚಲಾಯಿತು. ಪ್ರತಿನಿತ್ಯ ಸಾವಿರಾರು ಮಂದಿ ತುಮಕೂರಿನಿಂದ ಬೆಂಗಳೂರಿಗೆ ಕೆಲಸ ಅರಸಿ ತೆರಳುತ್ತಾರೆ. ಈ ರೈಲಿನ ಸಂಪರ್ಕ ವ್ಯವಸ್ಥೆಯಿಂದ ಸಾಕಷ್ಟು ಅನುಕೂಲವಾಗಿದೆ ಎಂಬ ಅಭಿಮಾನದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ.