ಧರ್ಮಸ್ಥಳದ ಯಾತ್ರಿಗಳ ಪಾದ ತೊಳೆದು ಮಸಾಜ್ ಮಾಡಿದ ಅವಧೂತ ವಿನಯ್ ಗುರೂಜಿ
Published : Mar 5, 2024, 9:21 PM IST
ಚಿಕ್ಕಮಗಳೂರು: ಪ್ರತಿವರ್ಷ ಶಿವರಾತ್ರಿ ಹಬ್ಬದಂದು ಶ್ರೀ ಮಂಜುನಾಥನ ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಜಿಲ್ಲೆಯ ವಿವಿಧ ಭಾಗ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಪಾದಯಾತ್ರೆಯ ಮೂಲಕ ಧರ್ಮಸ್ಥಳಕ್ಕೆ ಭಕ್ತಾದಿಗಳು ಹೋಗುವುದು ವಾಡಿಕೆ.
ಶಿವರಾತ್ರಿ ಹಬ್ಬಕ್ಕೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇರುವ ಹಿನ್ನೆಲೆ, ಈಗಾಗಲೇ ಭಕ್ತಾದಿಗಳು ಪಾದಯಾತ್ರೆ ಮೂಲಕ ಧರ್ಮಸ್ಥಳದ ಕಡೆಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಿಂದ ಹೋಗುವಂತಹ ಪಾದಯಾತ್ರಿಗಳು ಮೂಡಿಗೆರೆ ಮೂಲಕವೇ ಧರ್ಮಸ್ಥಳಕ್ಕೆ ಹೋಗಬೇಕು.
ಕೊಪ್ಪ ತಾಲೂಕಿನ ಶ್ರೀ ಹರಿಹರಪುರದಲ್ಲಿರುವ ಅವಧೂತ ವಿನಯ್ ಗುರೂಜಿ ಅವರು ಪಾದಯಾತ್ರಿಗಳ ಕಾಲಿಗೆ ಎಣ್ಣೆ ಹಚ್ಚಿ, ಮಸಾಜ್ ಮಾಡಿರುವ ಘಟನೆ ನಡೆದಿದೆ. ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಭಕ್ತರು ತೆರಳುತ್ತಿದ್ದು, ಶಿವರಾತ್ರಿಯಂದು ಪಾದಯಾತ್ರಿಗಳು ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ದರ್ಶನ ಮಾಡಲಿದ್ದಾರೆ.
ಪಾದಯಾತ್ರಿಗಳ ಕಾಲು ತೊಳೆದು ಅವರ ಕಾಲಿಗೆ ಪುಷ್ಪಗಳನ್ನ ಹಾಕಿರುವ ಅವರು, ಪಾದವನ್ನು ಕೂಡಾ ಮಸಾಜ್ ಮಾಡಿದ್ದಾರೆ. ಈ ವೇಳೆ, ಅವಧೂತ ವಿನಯ್ ಗುರೂಜೀಗೆ ಶಾಸಕಿ ನಯನಾ ಮೋಟಮ್ಮ ಕೂಡಾ ಸಾಥ್ ನೀಡಿದ್ದಾರೆ. ಮೂಡಿಗೆರೆ ತಾಲೂಕಿನ ನೀರು ಗಂಡಿಯಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಮೂಡಿಗೆರೆ ತಾಲೂಕಿನ ಸಾಮಾಜಿಕ ಸೇವಾ ಸಮಿತಿಯಿಂದ ಕಾರ್ಯಕ್ರಮ ನಡೆಯುತ್ತಿದೆ. ನಿತ್ಯ ಧರ್ಮಸ್ಥಳಕ್ಕೆ ತೆರಳುವ ಪಾದಯಾತ್ರಿಗಳಿಗೆ ಊಟ - ವಸತಿ ಸೌಲಭ್ಯವನ್ನು ಈ ಸಮಿತಿ ಕಲ್ಪಿಸಿದೆ. ಶಿವರಾತ್ರಿ ಹಿನ್ನೆಲೆ ಸಾವಿರಾರು ಭಕ್ತರು ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿರುವ ಕಾರಣ ಈ ಸೇವೆಯನ್ನು ಸಮಿತಿಯವರು ಮಾಡುತ್ತಿದ್ದಾರೆ.
ಇದನ್ನೂ ಓದಿ : ನ್ಯೂಸ್ ಪೇಪರ್ ಆಫ್ ಕರ್ನಾಟಕ ವತಿಯಿಂದ 67 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ