ಬೀಜಿಂಗ್: ಚೀನಾದ ಚಾಂಗ್'ಇ - 6 ಬಾಹ್ಯಾಕಾಶ ನೌಕೆಯು ಭೂಮಿಗೆ ತೆಗೆದುಕೊಂಡು ಬಂದ ಚಂದ್ರನ ಶಿಲಾ ಮಾದರಿಗಳ ಅಧ್ಯಯನ ಮುಂದುವರೆದಿದ್ದು, ಅಧ್ಗಯನದ ಇತ್ತೀಚಿನ ಫಲಿತಾಂಶಗಳನ್ನು ವಿಶ್ವದ ಪ್ರಮುಖ ವೈಜ್ಞಾನಿಕ ನಿಯತಕಾಲಿಕೆಗಳಲ್ಲಿ ಶುಕ್ರವಾರ ಪ್ರಕಟಿಸಲಾಗಿದೆ. ಚಂದ್ರನ ಕಡಿಮೆ ಪರಿಚಿತ, ದೂರದ ಭಾಗದ ಜ್ವಾಲಾಮುಖಿಗಳ ಇತಿಹಾಸವನ್ನು ಈ ಅಧ್ಯಯನಗಳು ಬಹಿರಂಗಪಡಿಸಿವೆ.
ಕೆಲವು ತಿಂಗಳ ಹಿಂದೆ ಚಂದ್ರನ ಮೇಲ್ಮೈ ಮೇಲೆ ಇಳಿದಿದ್ದ ಚಾಂಗ್'ಇ -6 ಹೊತ್ತು ತಂದ ಶಿಲಾ ಮಾದರಿಗಳು ಕ್ರಮವಾಗಿ 2.8 ಬಿಲಿಯನ್ ವರ್ಷಗಳ ಹಿಂದೆ ಮತ್ತು 4.2 ಬಿಲಿಯನ್ ವರ್ಷಗಳ ಹಿಂದೆ ಚಂದ್ರನ ದೂರದ ಭಾಗದಲ್ಲಿ ಸಂಭವಿಸಿದ ಎರಡು ಜ್ವಾಲಾಮುಖಿ ಘಟನೆಗಳನ್ನು ಸಾಕ್ಷೀಕರಿಸಿವೆ ಎಂದು ನೇಚರ್ ಜರ್ನಲ್ ನಲ್ಲಿ ಪ್ರಕಟವಾದ ಹೊಸ ಅಧ್ಯಯನ ತಿಳಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಧ್ಯಯನದಲ್ಲಿ, ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್ (ಸಿಎಎಸ್) ನ ಇನ್ಸ್ಟಿಟ್ಯೂಟ್ ಆಫ್ ಜಿಯಾಲಜಿ ಅಂಡ್ ಜಿಯೋಫಿಸಿಕ್ಸ್ನ ಸಂಶೋಧಕರು ಚಾಂಗ್'ಇ -6 ಲ್ಯಾಂಡಿಂಗ್ ಸೈಟ್ನಲ್ಲಿ ಸಂಗ್ರಹಿಸಿದ ಚಂದ್ರನ ಮಾದರಿಗಳ 108 ಬೇಸಾಲ್ಟ್ ತುಣುಕುಗಳನ್ನು ವಿಶ್ಲೇಷಿಸಿದ್ದಾರೆ. ಸುಮಾರು 2.8 ಮಿಲಿಯನ್ ವರ್ಷಗಳ ಹಿಂದೆ 107 ತುಣುಕುಗಳು ರೂಪುಗೊಂಡಿವೆ ಎಂದು ವಿಜ್ಞಾನಿಗಳು ನಿರ್ಧರಿಸಿದ್ದಾರೆ. ಇದು 2.8 ಬಿಲಿಯನ್ ವರ್ಷಗಳ ಹಿಂದಿನ ವಿಶಿಷ್ಟ ಜ್ವಾಲಾಮುಖಿ ಘಟನೆ ಬಹಿರಂಗಪಡಿಸಿದೆ. ಚಂದ್ರನ ಹತ್ತಿರದ ಭಾಗದಿಂದ ಪಡೆದ ಹಿಂದಿನ ಯಾವುದೇ ಶಿಲಾ ಮಾದರಿಗಳಲ್ಲಿ ಈ ವಿಷಯ ಕಂಡು ಬಂದಿರಲಿಲ್ಲ.