ತಿರುಪತಿ, ಆಂಧ್ರಪ್ರದೇಶ: ಪ್ರಧಾನಿ ಮೋದಿ ಅವರು 2040ರ ವೇಳೆಗೆ ಚಂದ್ರಯಾನ -3ರ ಪ್ರೇರಣೆಯಿಂದ ಚಂದ್ರನ ಮೇಲೆ ಕಾಲಿಡಲು ಬಯಸಿದ್ದಾರೆ ಎಂದು ಇಸ್ರೋ ಅಧ್ಯಕ್ಷ ಡಾ.ಸೋಮನಾಥ್ ಹೇಳಿದ್ದಾರೆ. ತಿರುಪತಿ ಸಮೀಪದ ಮೋಹನ್ ಬಾಬು ವಿಶ್ವವಿದ್ಯಾನಿಲಯದಲ್ಲಿ ಸತೀಶ್ ಧವನ್ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಮತ್ತು ರಾಷ್ಟ್ರೀಯ ವಾತಾವರಣ ಸಂಶೋಧನಾ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಚಂದ್ರಯಾನ- 3 ರ ಉಡಾವಣೆಯ ಲೈವ್ ವಿಡಿಯೋ 7 ಲಕ್ಷ ಜನರಿಂದ ವೀಕ್ಷಣೆ:ಕಳೆದ ವರ್ಷ ಆಗಸ್ಟ್ 23 ರಂದು, ಚಂದ್ರಯಾನ-3 ರ ಉಡಾವಣೆಯನ್ನು ಯೂಟ್ಯೂಬ್ ಮೂಲಕ ಸುಮಾರು 7 ಲಕ್ಷ ಜನರು ವೀಕ್ಷಿಸಿದ್ದಾರೆ. ಶಾಲೆಗಳು, ವಿಶ್ವವಿದ್ಯಾಲಯಗಳು, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸ್ಟ್ರೀಮಿಂಗ್ ಮೂಲಕ ಲಕ್ಷಾಂತರ ಜನರು ಪರೋಕ್ಷವಾಗಿ ವೀಕ್ಷಣೆ ಮಾಡಿದ್ದಾರೆ ಎಂದು ಇಸ್ರೋ ಅಧ್ಯಕ್ಷರು ಹೇಳಿದ್ದಾರೆ.
ಪ್ರಧಾನಿ ಅವರ ಕಾರ್ಯವನ್ನು ಗುಣಗಾನ ಮಾಡಿದ ಸೋಮನಾಥ್:ಚಂದ್ರಯಾನ-03 ರ ಉಡಾವಣೆಯ ಸಂದರ್ಭದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಹಳ ಮುಖ್ಯವಾದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೇ ಅಲ್ಲಿಂದಲೇ ಚಂದ್ರಯಾನ- 3 ಅನ್ನು ಲೈವ್ ಆಗಿ ವೀಕ್ಷಿಸಿದರು. ಉಡಾವಣೆಗೂ ಮುನ್ನ ಮತ್ತು ಅದರ ಯಶಸ್ಸಿನ ನಂತರ ಮೋದಿ ನೀಡಿದ ಪ್ರೇರಣೆ ನಮ್ಮ ವಿಜ್ಞಾನಿಗಳಿಗೆ ಹೆಚ್ಚಿನ ಶಕ್ತಿ ಹಾಗೂ ಸ್ಪೂರ್ತಿಯನ್ನು ನೀಡಿತು ಎಂದು ಅವರು ಹೇಳಿದರು. ಸಭೆಯ ನಂತರ ಪ್ರಧಾನಿಯವರು ಚಂದ್ರಯಾನ-3 ತಂಡವನ್ನು ಭೇಟಿಯಾಗಲು ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಬಂದಾಗ ತುಂಬಾ ಸಂತೋಷವಾಯಿತು ಎಂದು ಸೋಮನಾಥ ಇದೇ ವೇಳೆ ಸ್ಮರಿಸಿಕೊಂಡರು. ಪ್ರಧಾನಿಗಳ ಈ ಕಾರ್ಯವನ್ನು ಇಸ್ರೋ ಅಧ್ಯಕ್ಷರು ಗುಣಗಾನ ಕೂಡಾ ಮಾಡಿದರು.
ಸೋಮನಾಥ್ ಅವರು, ನಾವು ಕಳುಹಿಸಿರುವ ಚಂದ್ರಯಾನ-3 ಇದುವರೆಗೆ ಅಮೆರಿಕ, ರಷ್ಯಾದಂತಹ ದೇಶಗಳು ಮಾಡಿರುವ ಪ್ರಯೋಗಗಳಿಗಿಂತ ಭಿನ್ನವಾಗಿದೆ. ನಮ್ಮ ಬಾಹ್ಯಾಕಾಶ ನೌಕೆ ಚಂದ್ರನ ದಕ್ಷಿಣ ಭಾಗದ ಸಮೀಪಕ್ಕೆ ಹೋಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಭಾಗಿ ಆಗಿ ಬಳಿಕ ಅವರು ವಿದ್ಯಾರ್ಥಿಗಳೊಂದಿಗೂ ಸಂವಾದ ನಡೆಸಿದರು. ತಮಗೆ ಸ್ಫೂರ್ತಿ ನೀಡಿದ ಕಲಾಂ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಗಲಿಲ್ಲ ಎಂದು ಸೋಮನಾಥ ಬೇಸರ ಕೂಡಾ ವ್ಯಕ್ತಪಡಿಸಿದರು.
ಇದನ್ನು ಓದಿ:ಭಾರತದಲ್ಲಿ ಟ್ರಿಲಿಯನ್ಗಟ್ಟಲೇ ವೀಕ್ಷಣೆ ಪಡೆದುಕೊಳ್ಳುತ್ತಿದೆ ಯೂಟ್ಯೂಬ್ ಶಾರ್ಟ್ಸ್ - YouTube Shorts in india