ಬೆಂಗಳೂರು:ಟೆಕ್ಕಿಯೊಬ್ಬರು ತಾವು ಹಂಚಿಕೊಂಡ ಲೊಕೇಶನ್ ಸಹಾಯದಿಂದ ತಮ್ಮ ತಂದೆಯಿಂದ ಕಳುವಾಗಿದ್ದ ಫೋನ್ಸಹಿತ ಕಳ್ಳನನ್ನು ಪತ್ತೆ ಹಚ್ಚಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಹೌದು, ರಾಜ್ ಭಗತ್ ಎಂಬ ತಮಿಳುನಾಡಿನ ಟೆಕ್ಕಿ ಕಳವಾಗಿದ್ದ ತಮ್ಮ ತಂದೆಯ ಫೋನ್ ಹಾಗೂ ಇತರೆ ಕದ್ದ ವಸ್ತುಗಳೊಂದಿಗೆ ಕಳ್ಳನನ್ನು ಪತ್ತೆ ಮಾಡಿದ್ದಾರೆ.
ಫೋನ್ ಪತ್ತೆ ಹಚ್ಚಿದ ಬಗ್ಗೆ ಟೆಕ್ಕಿ ರಾಜ್ ಭಗತ್ ವಿವರಿಸಿ, "ಫೆಬ್ರವರಿ 4ರ ಮಧ್ಯರಾತ್ರಿ 1.40ರ ಸುಮಾರಿಗೆ ನಾಗರ್ಕೋಯಿಲ್-ಕಾಚಿಗುಡ ಎಕ್ಸ್ಪ್ರೆಸ್ನಲ್ಲಿ ತಂದೆ ಫೋನ್ ಇರಿಸಿದ ಕೈಚೀಲ ಕಳುವಾಗಿತ್ತು. ಎಲ್ಲೆಡೆ ಹುಡುಕಾಡಿದರು ಫೋನ್ ಪತ್ತೆಯಾಗಿರಲಿಲ್ಲ. ಕೈಚೀಲ ಕಳವಾಗಿದೆ ಎಂದು ತಂದೆಗೆ ಗೊತ್ತಾಗುವಷ್ಟರಲ್ಲಿ ಸುಮಾರು ಎರಡು ಗಂಟೆ ಕಳೆದಿತ್ತು. ನಂತರ ಅವರು ಬೇರೊಬ್ಬರ ಫೋನ್ನಿಂದ ನನಗೆ ಕರೆ ಮಾಡಿ ವಿಷಯ ತಿಳಿಸಿದರು. ನಮ್ಮ ಕುಟುಂಬ ಸದಸ್ಯರು ಫೋನ್ ಮೂಲಕ ಪರಸ್ಪರ ಲೊಕೇಶನ್ ಅನ್ನು ಹಂಚಿಕೊಂಡಿದ್ದೇವೆ. ಹೀಗಾಗಿ ನನ್ನ ತಂದೆಯ ಫೋನ್ ಲೊಕೇಶನ್ ಪರಿಶೀಲಿಸಿದಾಗ, ತಿರುನೆಲ್ವೇಲಿಯ ಮೇಳಪಾಲಯಂ ಬಳಿ ಫೋನ್ ಲೊಕೇಶನ್ ಟ್ರ್ಯಾಕ್ ಆಗಿತ್ತು. ಇದರಿಂದ ಫೋನ್ ಕದ್ದ ಕಳ್ಳ ತಿರುನೆಲ್ವೇಲಿ ಜಂಕ್ಷನ್ನಲ್ಲಿ ಇಳಿದು ಮತ್ತೊಂದು ರೈಲಿನ ಮೂಲಕ ನಾಗರ್ಕೋಯಿಲ್ಗೆ ಮರಳುತ್ತಿದ್ದಾನೆ ಎಂದು ನಾನು ಊಹಿಸಿದೆ" ಎಂದು ಹೇಳಿದರು.
"ನಾನು ನನ್ನ ಸ್ನೇಹಿತನೊಂದಿಗೆ ಕಳ್ಳನನ್ನು ಹಿಡಿಯಲು ನಿರ್ಧರಿಸಿದೆ. ಇದಕ್ಕಾಗಿ ರೈಲ್ವೆ ಪೊಲೀಸರನ್ನೂ ನಮ್ಮೊಂದಿಗೆ ಕರೆದೊಯ್ದಿದ್ದೆವು. ಲೊಕೇಶನ್ ಪ್ರಕಾರ, ಕಳ್ಳ ಪ್ರಯಾಣಿಸುತ್ತಿದ್ದ ಕನ್ಯಾಕುಮಾರಿ ಎಕ್ಸ್ಪ್ರೆಸ್ ಒಳಗೆ ತುಂಬಾ ಜನಸಂದಣಿ ಇತ್ತು ಮತ್ತು ಕಳ್ಳ ಜನಸಮೂಹದಲ್ಲಿ ನಾಪತ್ತೆಯಾಗಿದ್ದ. ನಂತರ ಕಳ್ಳ ರೈಲು ನಿಲ್ದಾಣದ ಮುಖ್ಯ ಗೇಟ್ ಮೂಲಕ ನಿರ್ಗಮಿಸಿ ಅಲ್ಲಿಂದ ಅಣ್ಣಾ ಬಸ್ ನಿಲ್ದಾಣಕ್ಕೆ ತೆರಳುವ ಬಸ್ ಹತ್ತಿಕೊಂಡು ಹೋಗುತ್ತಿರುವುದು ಕಂಡುಬಂತು. ಆದ್ದರಿಂದ, ನಾವು ನಮ್ಮ ಬೈಕಿನಲ್ಲಿ ಬಸ್ ಅನ್ನು ಬೆನ್ನಟ್ಟಲು ಪ್ರಾರಂಭಿಸಿದೆವು. ಅಂತಿಮವಾಗಿ, ಕಳ್ಳ ಅಣ್ಣಾ ಬಸ್ ನಿಲ್ದಾಣದಲ್ಲಿ ಇಳಿದ" ಎಂದು ತಿಳಿಸಿದರು.