ಹೈದರಾಬಾದ್: 2025ರ ಹೊಸ ವರ್ಷವನ್ನು ಪ್ರಪಂಚದಾದ್ಯಂತ ಸಂಭ್ರಮದಿಂದ ಬರಮಾಡಿಕೊಳ್ಳಲಾಗಿದೆ. ಎಲ್ಲೆಡೆ ಹೊಸ ವರ್ಷದ ಸಂಭ್ರಮಾಚರಣೆ ಮನೆ ಮಾಡಿದೆ. ಅದರಂತೆ ಬಾಹ್ಯಾಕಾಶದಲ್ಲೂ ನ್ಯೂ ಇಯರ್ ಆಚರಣೆ ನಡೆದಿದೆ. ಹೌದು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್)ದಲ್ಲಿರುವ ಗಗನಯಾತ್ರಿಗಳು ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.
ಇದೇ ವೇಳೆ, ತಾಂತ್ರಿಕ ತೊಂದರೆಯಿಂದಾಗಿ ದೀರ್ಘಕಾಲದಿಂದಾಗಿ ಐಎಸ್‌ಎಸ್‌ನಲ್ಲೇ ಉಳಿದುಕೊಂಡಿರುವ ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಕೂಡ, 2025 ಅನ್ನು ಸಂತಸದಿಂದ ಬರಮಾಡಿಕೊಂಡಿದ್ದಾರೆ. ಇದೇ ವೇಳೆ ಅವರು ಒಂದೇ ದಿನ ಬರೋಬ್ಬರಿ 16 ಬಾರಿ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಲಿರುವುದು ವಿಶೇಷ.
ಈ ಕುರಿತು ಐಎಸ್‌ಎಸ್ ಅಧಿಕೃತ 'ಎಕ್ಸ್' ಅಕೌಂಟ್ ಮೂಲಕ ಟ್ವೀಟ್ ಮಾಡಲಾಗಿದ್ದು, "ಎಕ್ಸ್‌ಪೆಡಿಶನ್ 72 ಸಿಬ್ಬಂದಿ ಬಾಹ್ಯಾಕಾಶದಲ್ಲಿ ಹೊಸ ವರ್ಷದಂದು 16 ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ನೋಡುತ್ತಾರೆ. ಐಎಸ್‌ಎಸ್ ಭೂಮಿಯನ್ನು ನಿರತಂತರವಾಗಿ ಪ್ರದಕ್ಷಿಣೆ ಹಾಕುವುದರಿಂದ, ಗಗನಯಾತ್ರಿಗಳು ಇದು ಸಾಧ್ಯವಾಗಲಿದೆ. ಐಎಸ್ಎಸ್ ದಿನದಲ್ಲಿ ಗಂಟೆಗೆ ಸರಾಸರಿ 28,000 ಕಿ.ಮೀ ವೇಗದಲ್ಲಿ 16 ಬಾರಿ ಭೂಮಿಯನ್ನು ಸುತ್ತುತ್ತದೆ. ಈ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಭೂಮಿಯಿಂದ 400 ಕಿ.ಮೀ ದೂರದ ಬಾಹ್ಯಾಕಾಶದಲ್ಲಿದೆ. ಈ ಬಾಹ್ಯಾಕಾಶ ನಿಲ್ದಾಣವು ಭೂಮಿಯನ್ನು ಒಮ್ಮೆ ಸುತ್ತಲು 90 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ" ಎಂದು ತಿಳಿಸಿದೆ.
ಹಲವು ವರ್ಷಗಳಿಂದ ಭೂಕಕ್ಷೆಯಿಂದ ಕ್ಲಿಕ್ಕಿಸಲಾದ ವಿಭಿನ್ನ ಸೂರ್ಯೋದಯ ಮತ್ತು ಸೂರ್ಯಾಸ್ತದ ಚಿತ್ರಗಳನ್ನು ಸಹ ಐಎಸ್‌ಎಸ್ ಹಂಚಿಕೊಂಡಿದೆ.