ನವದೆಹಲಿ : ಎಲೋನ್ ಮಸ್ಕ್ ಅವರು ಭಾರತ ಭೇಟಿಗೆ ಆಗಮಿಸುವ ಮುನ್ನವೇ ಅವರ ಉಪಗ್ರಹ ಆಧರಿತ ಸ್ಟಾರ್ಲಿಂಕ್ ಇಂಟರ್ನೆಟ್ ಸರ್ವಿಸ್ ಅನ್ನು ಭಾರತದಲ್ಲಿ ಆರಂಭಿಸಲು ಸಂವಹನ ಸಚಿವಾಲಯವು ತಾತ್ಕಾಲಿಕ ಅನುಮೋದನೆ ನೀಡಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಅನುಮೋದನೆಯ ಫೈಲ್ ಪ್ರಸ್ತುತ ಸಂವಹನ ಸಚಿವ ಅಶ್ವಿನಿ ವೈಷ್ಣವ್ ಅವರ ಕಚೇರಿಗೆ ತಲುಪಿದ್ದು, ಕೆಲ ಭದ್ರತಾ ವಿಷಯಗಳ ಬಗ್ಗೆ ಗೃಹ ಸಚಿವಾಲಯದ ಅಂತಿಮ ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ವಿದೇಶಿ ಹೂಡಿಕೆ ಮತ್ತು ನಿವ್ವಳ ಮೌಲ್ಯದಂತಹ ವಿಷಯಗಳನ್ನು ಒಳಗೊಂಡಿರುವ ವಾಣಿಜ್ಯ ಭಾಗವನ್ನು ಈಗಾಗಲೇ ಪರಿಶೀಲಿಸಲಾಗಿದೆ ಮತ್ತು ಪರವಾನಗಿ ಷರತ್ತುಗಳಿಗೆ ಅನುಗುಣವಾದ ತಾಂತ್ರಿಕ ಅವಶ್ಯಕತೆಗಳನ್ನು ಕೂಡ ಪರಿಶೀಲಿಸಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ. ಸಚಿವ ವೈಷ್ಣವ್ ಅವರ ಕಚೇರಿಯಿಂದ ಅನುಮೋದನೆ ಪಡೆದ ನಂತರ ಸ್ಟಾರ್ಲಿಂಕ್ಗೆ ಉಪಗ್ರಹ ಸಂವಹನ ಮೂಲಕ ಜಾಗತಿಕ ಮೊಬೈಲ್ ವೈಯಕ್ತಿಕ ಸಂವಹನ (ಜಿಎಂಪಿಸಿಎಸ್) (Global Mobile Personal Communication by Satellite - GMPCS) ಸೇವೆಗಳ ಪರವಾನಗಿ ನೀಡಲಾಗುವುದು. ದೇಶದಲ್ಲಿ ಉಪಗ್ರಹ ಸಂವಹನ ಸೇವೆಗಳನ್ನು ಆರಂಭಿಸಲು ಈ ಪರವಾನಗಿ ಪಡೆಯುವುದು ಅಗತ್ಯ.
ಮಸ್ಕ್ ಈ ಹಿಂದೆಯೂ ಭಾರತದಲ್ಲಿ ತನ್ನ ಉಪಗ್ರಹ ಇಂಟರ್ ನೆಟ್ ಸೇವೆಯನ್ನು ಪ್ರಾರಂಭಿಸಲು ಪ್ರಯತ್ನಿಸಿದ್ದರು. ತೀರಾ ಇತ್ತೀಚೆಗೆ ಅಂದರೆ ನವೆಂಬರ್ 2022 ರಲ್ಲಿ ಸ್ಟಾರ್ಲಿಂಕ್ ಜಿಎಂಪಿಸಿಎಸ್ ಪರವಾನಗಿಗಾಗಿ ಅರ್ಜಿ ಸಲ್ಲಿಸಿದೆ. ಆದಾಗ್ಯೂ, ಸರ್ಕಾರದೊಂದಿಗಿನ ಭಿನ್ನಾಭಿಪ್ರಾಯಗಳ ಕಾರಣದಿಂದ ದೇಶದಲ್ಲಿ ಯೋಜಿತ ಉಪಗ್ರಹ ಸಂವಹನ ಸೇವಾ ಪ್ರಯೋಗಗಳನ್ನು ರದ್ದುಗೊಳಿಸಲಾಗಿತ್ತು.