ಬೆಂಗಳೂರು: ವಾಹನ ಪ್ರಿಯರು 10 - 15 ವರ್ಷಗಳ ಕಾಲ ಸಂಗಾತಿಯಂತೆ ಇದ್ದ ಪ್ರೀತಿಯ ಹಳೆಯ ಬೈಕ್ನ್ನು ಬಳಸಲಾಗದೇ ಗುಜುರಿಗೆ ಮಾರಿ ಕೊನೆಗೆ ಇಎಮ್ಐ ಮುಖಾಂತರ ಹೊಸ ಬೈಕ್ ಖರೀದಿಸುತ್ತಾರೆ. ಆದರೆ ಇನ್ಮುಂದೆ ಸಾಲ - ಸೂಲ ಮಾಡಿ ನೀವು ಹೊಸ ಬೈಕ್ ಖರೀದಿಸುವ ಅಗತ್ಯವೇ ಇಲ್ಲ. ಏಕೆಂದರೆ ಈಗ ಭಾರತದಲ್ಲಿ ಹಳೆಯ ವಾಹನವನ್ನು ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸಲು ರೆಟ್ರೋಫಿಟ್ ಎಂಬ ಹೊಸ ತಂತ್ರಜ್ಞಾನ ಬಂದಿದೆ. ಸದ್ಯ ಈ ಟ್ರೆಂಡ್ ನಗರಗಳಲ್ಲಿ ಭಾರಿ ಜನಪ್ರಿಯತೆಗಳಿಸುತ್ತಿದೆ. ಹೆಚ್ಚಿನ ಜನರು ತಮ್ಮ ಹಳೆಯ ಬೈಕ್ನ್ನು ಮಾರುವ ಬದಲು ಮರುಬಳಕೆ ಮಾಡಲು ಮುಂದಾಗಿದ್ದಾರೆ.
ಕೇಂದ್ರದಿಂದಲೇ ಗ್ರೀನ್ ಸಿಗ್ನಲ್: ಕೇಂದ್ರ ಸರ್ಕಾರವು ರೆಟ್ರೋಫಿಟ್ ನೀತಿಗೆ ಅನುಮೋದನೆ ನೀಡಿರುವುದರಿಂದ ನಿಮ್ಮ ಹಳೆಯ ವಾಹನಗಳಿಗೆ ಹೊಸ ಲೈಫ್ ಸಿಗಬಹುದು ಎನ್ನುತ್ತಾರೆ ತಜ್ಞರು. ಮುಖ್ಯವಾಗಿ ಪೆಟ್ರೋಲ್ ಚಾಲಿತ ಬೈಕ್ಗಳನ್ನು ರೆಟ್ರೋಫಿಟ್ ಮಾಡುವ ಮೂಲಕ ಬ್ಯಾಟರಿ ಬೈಕ್ಗಳಾಗಿ ಪರಿವರ್ತಿಸಬಹುದು. ಹೀಗೆ ಪರಿವರ್ತಿಸುವ ಬೈಕ್ಗಳು ಯಾವುದೇ ಸಮಸ್ಯೆ ಇಲ್ಲದೇ ಇನ್ನೂ ಹತ್ತು ವರ್ಷ ಓಡುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ಮೊದಲು ಸರಿಯಾದ ಕಂಪನಿಯನ್ನು ಆರಿಸಿ :ಬ್ಯಾಟರಿ ಚಾಲಿತ ಬೈಕುಗಳನ್ನಾಗಿ ಹಳೆಯ ಬೈಕ್ಗಳನ್ನು ಪರಿವರ್ತಿಸುವ ಮೊದಲು, ರೆಟ್ರೋಫಿಟ್ ಮಾಡಲು ಉತ್ತಮ ಕಂಪನಿಯನ್ನು ಆಯ್ಕೆ ಮಾಡುವುದು ಸೂಕ್ತ. ಆದರೆ, ಅಂತಹ ಕಂಪನಿಯನ್ನು ಪತ್ತೆ ಹಚ್ಚುವುದು ಹೇಗೆ. ಅದಕ್ಕೂ ಮಾರ್ಗವಿದೆ. ರೆಟ್ರೋಫಿಟ್ ಮಾಡಲು ನೀವು ಆರಿಸಲು ಬಯಸಿರುವ ಕಂಪನಿಯನ್ನು ಆಟೋಮೊಬೈಲ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಗುರುತಿಸಿದೆಯೇ ಎಂದು ಪರಿಶೀಲಿಸಬೇಕು.
ಏಕೆಂದರೆ ನಿಮ್ಮ ಬೈಕ್ಗೆ ಅಳವಡಿಸುವ ಬ್ಯಾಟರಿಗಳು ಗುಣಮಟ್ಟವಾಗಿರಬೇಕು. ಹಾಗಾಗಿ ಇಂತಹ ಬ್ಯಾಟರಿಗಳಿಗೆ ARAI ಗುರುತಿಸುವಿಕೆ ಬಹಳ ಮುಖ್ಯ. ARAI ಗುರುತಿಸಿರುವ ಕಂಪನಿಗಳಾದರೆ ಬ್ಯಾಟರಿಗಳ ಮೇಲೆ ಒಂದು ಅಥವಾ ಎರಡು ವರ್ಷಗಳವರೆಗೆ ವಾರಂಟಿಯನ್ನು ಸಹ ನೀಡುತ್ತವೆ. ಇಲ್ಲವಾದರೆ ಬ್ಯಾಟರಿಗಳ ಗುಣಮಟ್ಟ ಹದಗೆಟ್ಟಾಗ ಸ್ಫೋಟಗೊಳ್ಳುವ ಅಪಾಯವಿದೆ. ಎಆರ್ಎಐ ಪ್ರಮಾಣೀಕರಣ ಹೊಂದಿರುವ ಕಂಪನಿಯ ಬ್ಯಾಟರಿಗಳು ಮಾತ್ರ ಗುಣಮಟ್ಟದ ಗ್ಯಾರಂಟಿ ಹೊಂದಿರುತ್ತದೆ ಎನ್ನುತ್ತಾರೆ ತಜ್ಞರು.