ನವದೆಹಲಿ: ತ್ವರಿತವಾಗಿ ಎಲೆಕ್ಟ್ರಾನಿಕ್ಸ್ ಟೆಸ್ಟಿಂಗ್ ಮಾಡುವ ಸರ್ಕಾರದ ನಿರ್ಧಾರ ಮೂಲ ಸಲಕರಣೆ ತಯಾರಕರು (ಒಇಎಂ) ತಮ್ಮ ಉತ್ಪನ್ನಗಳಿಗೆ ಅತ್ಯಂತ ಸೂಕ್ತವಾದ ಪರೀಕ್ಷಾ ವಿಧಾನವನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ. ಆ ಮೂಲಕ ಮಾರುಕಟ್ಟೆಗೆ ತಮ್ಮ ಎಲೆಕ್ಟ್ರಾನಿಕ್ ವಸ್ತುಗಳ ಬಿಡುಗಡೆಯನ್ನು ತ್ವರಿತಗೊಳಿಸುತ್ತದೆ ಎಂದು ಇಂಡಿಯಾ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ಐಸಿಇಎ) ಸೋಮವಾರ ತಿಳಿಸಿದೆ.
2021 ರ ಕಡ್ಡಾಯ ನೋಂದಣಿ ಆದೇಶ (ಸಿಆರ್ಒ) ಅಡಿ ಉತ್ಪನ್ನಗಳಿಗೆ ಹೆಚ್ಚು ಪರಿಣಾಮಕಾರಿ ಸಮಾನಾಂತರ ಪರೀಕ್ಷಾ ಪ್ರಕ್ರಿಯೆಯನ್ನು ಸರ್ಕಾರ ಇತ್ತೀಚೆಗೆ ಪರಿಚಯಿಸಿದೆ. ಈ ಹೊಸ ವಿಧಾನವು ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಪರೀಕ್ಷಿಸಲು ಮತ್ತು ನೋಂದಾಯಿಸಲು ಅಗತ್ಯವಿರುವ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಈ ಹಿಂದೆ ಇದ್ದ 16 - 20 ವಾರಗಳಿಂದ ಕೇವಲ 8 - 12 ವಾರಗಳಿಗೆ ಈ ಪ್ರಕ್ರಿಯೆ ಇಳಿಕೆಯಾಗಲಿದೆ.
"ಈ ಬೆಳವಣಿಗೆಯು ಒಇಎಂಗಳಿಗೆ ತಮ್ಮ ಉತ್ಪನ್ನಗಳಿಗೆ ಅತ್ಯಂತ ಸೂಕ್ತವಾದ ಪರೀಕ್ಷಾ ವಿಧಾನವನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ. ಆ ಮೂಲಕ ಪ್ರಮಾಣೀಕರಣದ ಸಮಯವನ್ನು ಕಡಿಮೆ ಮಾಡುತ್ತದೆ, ಮಾರುಕಟ್ಟೆಗೆ ಬಿಡುಗಡೆ ಮಾಡುವ ವಿಳಂಬ ಕಡಿಮೆ ಮಾಡುತ್ತದೆ ಮತ್ತು ಅಂತಿಮವಾಗಿ ಉದ್ಯಮಕ್ಕೆ ಹೆಚ್ಚು ಅನುಕೂಲಕರ ವ್ಯಾಪಾರ ವಾತಾವರಣಕ್ಕೆ ಕೊಡುಗೆ ನೀಡುತ್ತದೆ" ಎಂದು ಐಸಿಇಎ ಅಧ್ಯಕ್ಷ ಪಂಕಜ್ ಮೊಹಿಂದ್ರೂ ಹೇಳಿದರು.