QR Code PAN Card: ಹಣಕಾಸು ವಹಿವಾಟಿಗೆ ಪ್ಯಾನ್ ಕಾರ್ಡ್(PAN Card) ಎಷ್ಟು ಮುಖ್ಯ ಎಂದು ಎಲ್ಲರಿಗೂ ಗೊತ್ತಿರುವಂಥದ್ದೇ. ತೆರಿಗೆದಾರರ ಗುರುತಿಗಾಗಿ ಮುಂಚೂಣಿಗೆ ಬಂದ ಪ್ಯಾನ್ ಇನ್ನು ಮುಂದೆ ಕ್ಯೂಆರ್ ಕೋಡ್‌ನೊಂದಿಗೆ ಬರಲಿದೆ. ಇದರಿಂದ ತೆರಿಗೆದಾರರ ಡಿಜಿಟಲ್ ಅನುಭವ ಹೆಚ್ಚಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) ಸಭೆಯಲ್ಲಿ ಪ್ಯಾನ್ 2.0 ಯೋಜನೆ ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ.
ಏನಿದರ ಉದ್ದೇಶ?: ಸರ್ಕಾರಿ ಇಲಾಖೆಗಳ ಎಲ್ಲಾ ಡಿಜಿಟಲ್ ವ್ಯವಸ್ಥೆಗಳಲ್ಲಿ ಪ್ಯಾನ್ ಅನ್ನು ಮುಖ್ಯ ಗುರುತಿಸುವಿಕೆಯಾಗಿ ಬಳಸುವುದು ಇದರ ಹಿಂದಿನ ಉದ್ದೇಶ. ಈ ಯೋಜನೆಗೆ ಕೇಂದ್ರ ಸರ್ಕಾರ 1,435 ಕೋಟಿ ರೂಪಾಯಿ ವ್ಯಯಿಸಲಿದೆ. ಪ್ಯಾನ್ 2.0 ಯೋಜನೆಯು ತಂತ್ರಜ್ಞಾನದ ಮೂಲಕ ತೆರಿಗೆದಾರರ ನೋಂದಣಿ ಸೇವೆಗಳಲ್ಲಿ ದೊಡ್ಡ ಬದಲಾವಣೆ ತರಲು ಸಹಾಯ ಮಾಡಲಿದೆ. ತೆರಿಗೆದಾರರು ಅನೇಕ ರೀತಿಯ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಸುಲಭವಾಗಿ ಸೇವೆಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಸೇವೆಗಳ ವಿತರಣೆಯನ್ನೂ ತ್ವರಿತಗೊಳಿಸಬಹುದು ಮತ್ತು ಗುಣಮಟ್ಟವೂ ಸುಧಾರಿಸಲಿದೆ. ಎಲ್ಲಾ ಮಾಹಿತಿ ಒಂದೇ ಸ್ಥಳದಲ್ಲಿ ಲಭ್ಯವಿರುತ್ತದೆ. ಡೇಟಾ ಸುರಕ್ಷಿತವಾಗಿ ಉಳಿಯುತ್ತದೆ. ಪರಿಸರಸ್ನೇಹಿ ಪ್ರಕ್ರಿಯೆ ವೆಚ್ಚ ತಗ್ಗಿಸುತ್ತದೆ.