Semiconductor Fabrication Facility: ಗುಜರಾತ್‌ನ ಧೋಲೇರಾದಲ್ಲಿ 91,000 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಗಾ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಸೌಲಭ್ಯ ನಿರ್ಮಿಸುತ್ತಿರುವ ಟಾಟಾ ಸನ್ಸ್ ಮತ್ತು ತೈವಾನ್‌ನ ಪವರ್‌ಚಿಪ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೊರೇಷನ್ (ಪಿಎಸ್‌ಎಂಸಿ) ಮುಖ್ಯಸ್ಥರ ನಿಯೋಗವನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಭೇಟಿ ಮಾಡಿ ಮಾತುಕತೆ ನಡೆಸಿದರು.
ಈ ಬಗ್ಗೆ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, 'ಟಾಟಾ ಸನ್ಸ್ ಮತ್ತು ಪಿಎಸ್‌ಎಂಸಿ ಮುಖ್ಯಸ್ಥರೊಂದಿಗೆ ಉತ್ತಮ ಸಭೆ ನಡೆಸಿದ್ದೇನೆ. ಅವರು ತಮ್ಮ ಸೆಮಿಕಂಡಕ್ಟರ್ ತಯಾರಿಕಾ ಯೋಜನೆಗಳ ಕುರಿತು ಅಪ್ಡೇಟ್ ಹಂಚಿಕೊಂಡರು. PSMC ಭಾರತದಲ್ಲಿ ತನ್ನ ವಿಸ್ತರಣೆಗೆ ಉತ್ಸಾಹ ತೋರಿಸಿದೆ' ಎಂದು ತಿಳಿಸಿದ್ದಾರೆ.
ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್ ಸೇರಿದಂತೆ ಸಂಸ್ಥೆಯ ತಂಡವನ್ನು ಭೇಟಿ ಮಾಡಿದ ನಂತರ ರೈಲ್ವೇ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, "ಧೋಲೆರಾದಲ್ಲಿ ಸೆಮಿಕಂಡಕ್ಟರ್ ಫ್ಯಾಬ್‌ಗಾಗಿ ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ಪಿಎಸ್‌ಎಂಸಿ ನಡುವೆ ವಿವರವಾದ ತಂತ್ರಜ್ಞಾನ ಒಪ್ಪಂದಕ್ಕೆ ಸಹಿ ಹಾಕಲಾಗಿದೆ" ಎಂದು ಹೇಳಿದರು.
ಕಳೆದ ಮಾರ್ಚ್‌ನಲ್ಲಿ ಟಾಟಾ-ಪಿಎಸ್‌ಎಂಸಿ ಚಿಪ್ ಸ್ಥಾವರಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. ಫ್ಯಾಬ್ ನಿರ್ಮಾಣದಿಂದ ಈ ಪ್ರದೇಶದಲ್ಲಿ 20,000ಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಕೌಶಲದ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಫ್ಯಾಬ್ ತಿಂಗಳಿಗೆ 50,000 ವೇಫರ್‌ಗಳ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಉದ್ಯಮದಲ್ಲಿ ಅತ್ಯುತ್ತಮ ಕಾರ್ಖಾನೆ ದಕ್ಷತೆ ಸಾಧಿಸಲು ಡೇಟಾ ವಿಶ್ಲೇಷಣೆ ಮತ್ತು ಮಷಿನ್ ಲರ್ನಿಂಗ್ ಬಳಸಲಾಗುತ್ತಿದೆ.
ಕಂಪನಿಗಳ ಪ್ರಕಾರ, ಹೊಸ ಸೆಮಿಕಂಡಕ್ಟರ್ ಕಾರ್ಖಾನೆಯು ಪವರ್ ಮ್ಯಾನೇಜ್‌ಮೆಂಟ್ ಐಸಿಗಳು, ಡಿಸ್‌ಪ್ಲೇ ಡ್ರೈವರ್‌ಗಳು, ಮೈಕ್ರೊಕಂಟ್ರೋಲರ್‌ಗಳು (ಎಂಸಿಯುಗಳು) ಮತ್ತು ಹೆಚ್ಚಿನ ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಲಾಜಿಕ್‌ಗಳಂತಹ ಅಪ್ಲಿಕೇಶನ್‌ಗಳಿಗೆ ಚಿಪ್‌ಗಳನ್ನು ತಯಾರಿಸುತ್ತದೆ. ಇವುಗಳು ಆಟೋಮೋಟಿವ್, ಕಂಪ್ಯೂಟಿಂಗ್ ಮತ್ತು ಡೇಟಾ ಸಂಗ್ರಹಣೆಯಂತಹ ಮಾರುಕಟ್ಟೆಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯಾಗಿದೆ.
ಚಂದ್ರಶೇಖರನ್ ಮಾತನಾಡಿ, "ಟಾಟಾ ಗ್ರೂಪ್ ದೇಶದ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಸಂಪ್ರದಾಯವನ್ನು ಹೊಂದಿದೆ. ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್‌ಗೆ ನಮ್ಮ ಪ್ರವೇಶವು ಈ ಪರಂಪರೆಯನ್ನು ಮತ್ತಷ್ಟು ನಿರ್ಮಿಸುತ್ತದೆ ಎಂಬ ವಿಶ್ವಾಸವಿದೆ" ಎಂದರು.
ಇದನ್ನೂ ಓದಿ:ಟ್ಯಾಕ್ಬ್ಯಾಕ್, ಫೋಟೋ ಎಡಿಟ್- Meta AI ನಲ್ಲಿ ಹೊಸ ವೈಶಿಷ್ಟ್ಯ ಪರಿಚಯಿಸಿದ ವಾಟ್ಸಾಪ್! - WhatsApp New Feature