ವಾಷಿಂಗ್ಟನ್, ಅಮೆರಿಕ:ದೇವ ಕಣ ಕಂಡು ಹಿಡಿದ ಬ್ರಿಟನ್ನ ಖ್ಯಾತ ಭೌತಶಾಸ್ತ್ರಜ್ಞ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಪೀಟರ್ ಹಿಗ್ಸ್ ವಿಧಿವಶರಾಗಿದ್ದಾರೆ. 94 ವರ್ಷದ ಹಿಗ್ಸ್ ಅವರ ನಿವಾಸದಲ್ಲಿ ವಯೋಸಹಜತೆ ಹಿನ್ನೆಲೆಯಲ್ಲಿ ಮರಣ ಹೊಂದಿದ್ದಾರೆ ಎಂದು ಸ್ಕಾಟ್ಲೆಂಡ್‌ನ ಎಡಿನ್‌ಬರ್ಗ್ ವಿಶ್ವವಿದ್ಯಾಲಯ ತಿಳಿಸಿದೆ. ಯುವ ವಿಜ್ಞಾನಿಗಳಿಗೆ ಉತ್ತಮ ಶಿಕ್ಷಕ ಹಾಗೂ ಮಾರ್ಗದರ್ಶಕ ಮತ್ತು ಸ್ಫೂರ್ತಿ ಚಿಲುಮೆ ಆಗಿದ್ದರು ಎಂದು ಸ್ಕಾಟಿಷ್ ವಿಶ್ವವಿದ್ಯಾನಿಲಯ ಪ್ರಶಂಸಿಸಿದೆ.
ಅವರು 'ದೈವಿಕ ಕಣ' ಅಥವಾ 'ಹಿಗ್ಸ್ಬೋಸನ್' ಸಿದ್ಧಾಂತದೊಂದಿಗೆ ತಮ್ಮ ವ್ಯಾಪಕ ಸಂಶೋಧನೆಗಳಿಗಾಗಿ ಪ್ರಪಂಚದಾದ್ಯಂತ ಪೀಟರ್ ಹಿಗ್ಸ್ ಸಾಕಷ್ಟು ಖ್ಯಾತಿ ಗಳಿಸಿದ್ದರು. ಎಲೆಕ್ಟ್ರಾನ್, ಕ್ವಾರ್ಕ್, ಕಣ ಮತ್ತು ಬ್ರಹ್ಮಾಂಡ ಹೇಗೆ ದ್ರವ್ಯರಾಶಿಯನ್ನು ಪಡೆಯಿತು ಎಂಬುದರ ಬಗ್ಗೆ ಅಧ್ಯಯನ ಮಾಡಿ, ತಮ್ಮ ಸಂಶೋಧನೆಯ ಮೂಲಕ ಜಗತ್ತಿಗೆ ತಿಳಿಸುವಲ್ಲಿ ಯಶಸ್ವಿಯಾಗಿದ್ದರು. ಭೌತಶಾಸ್ತ್ರದಲ್ಲಿ ಅನೇಕ ನಿಗೂಢಗಳನ್ನು ಅವರು ಭೇದಿಸಿದರು. ಅಷ್ಟೇ ಅಲ್ಲ 1964 ರಲ್ಲಿ ಅವರು ತಮ್ಮ ಸಿದ್ಧಾಂತಗಳ ಮೂಲಕ ಬೋಸಾನ್ ಕಣದ ಅಸ್ತಿತ್ವವನ್ನು ಘೋಷಿಸಿದರು.
2012 ರಲ್ಲಿ ಪರಮಾಣು ಸಂಶೋಧನೆಗಾಗಿ ಯುರೋಪಿಯನ್ ಆರ್ಗನೈಸೇಶನ್‌ನ ಲಾರ್ಜ್ ಹ್ಯಾಡ್ರಾನ್ ಕೊಲೈಡರ್‌ನಲ್ಲಿ ದೇವ ಕಣದ ಮೇಲೆ ಪ್ರಯೋಗಗಳನ್ನು ನಡೆಸಿದರು. ಆ ಫಲಿತಾಂಶಗಳ ಆಧಾರದ ಮೇಲೆ, ವಿಜ್ಞಾನಿಗಳು ಅರ್ಧ ಶತಮಾನದ ಹಿಂದೆ ಹಿಗ್ಸ್ ರೂಪಿಸಿದ ಸಿದ್ಧಾಂತವಾದ ಬೋಸಾನ್ ಕಣದ ಅಸ್ತಿತ್ವವನ್ನು ದೃಢಪಡಿಸಿದರು. ಅವರು ತಮ್ಮ ಈ ಸಿದ್ಧಾಂತ ಮಂಡಿಸಿದ್ದಕ್ಕಾಗಿ ಬೆಲ್ಜಿಯಂ ಭೌತಶಾಸ್ತ್ರಜ್ಞ ಫ್ರಾಂಕೋಯಿಸ್ ಅವರ ಜತೆಗೂಡಿ 2013 ರಲ್ಲಿ ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದರು.