ನವದೆಹಲಿ: ಇತ್ತೀಚಿನ ಎರಡು ಚಂದ್ರ ರಾತ್ರಿಗಳ ಅವಧಿಯಲ್ಲಿ ಬದುಕುಳಿದ ನಂತರ, ಜಪಾನ್ನ ಸ್ಮಾರ್ಟ್ ಲ್ಯಾಂಡರ್ ಫಾರ್ ಇನ್ವೆಸ್ಟಿಗೇಷನ್ ಮೂನ್ (ಎಸ್ಎಲ್ಐಎಂ -ಸ್ಲಿಮ್) (Smart Lander for Investigating Moon) ಈಗ ಮತ್ತೊಮ್ಮೆ ನಿಷ್ಕ್ರಿಯವಾಗಿದೆ ಎಂದು ದೇಶದ ಬಾಹ್ಯಾಕಾಶ ಸಂಸ್ಥೆ ಜಾಕ್ಸಾ ಸೋಮವಾರ ತಿಳಿಸಿದೆ. ಜಪಾನಿನಲ್ಲಿ ಮೂನ್ ಸ್ನೈಪರ್ ಎಂದೂ ಕರೆಯಲ್ಪಡುವ ಸ್ಲಿಮ್ ಜನವರಿ 20 ರಂದು ಚಂದ್ರನ ಮೇಲ್ಮೈ ಮೇಲೆ ಇಳಿದಿತ್ತು.
ಯೋಜಿಸಿದಂತೆ ಗುರಿಯ 100 ಮೀಟರ್ ಒಳಗೆ ಸ್ಲಿಮ್ ಪಿನ್ ಪಾಯಿಂಟ್ ಲ್ಯಾಂಡಿಂಗ್ ಸಾಧಿಸಿದರೂ, ಲ್ಯಾಂಡರ್ ತಲೆಕೆಳಗಾಗಿ ಇಳಿದಿತ್ತು. ಅದರ ಸೌರ ಫಲಕಗಳು ಸೂರ್ಯನಿಗೆ ಮುಖ ಮಾಡದ ಕಾರಣದಿಂದ ಲ್ಯಾಂಡರ್ಗೆ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ. ಚಂದ್ರನ ರಾತ್ರಿಗಳಲ್ಲಿ ತಾಪಮಾನ ಮೈನಸ್ 130 ಡಿಗ್ರಿಗಳಿಗೆ ಇಳಿಯುವ ಕಾರಣದಿಂದ ಲ್ಯಾಂಡರ್ ಸಂಪೂರ್ಣ ಹೆಪ್ಪುಗಟ್ಟಿದಂತಾಗಿ ಸ್ತಬ್ಧಗೊಳ್ಳಬಹುದು ಎಂದು ಯೋಜನೆಯ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದರು.
200 ಕಿಲೋಗ್ರಾಂಗಳಷ್ಟು ತೂಕದ ಮಾನವರಹಿತ ಲ್ಯಾಂಡರ್ ಚಳಿಗಾಲದಲ್ಲಿ ಬದುಕುಳಿದಿದೆ. ಆದರೆ ಕೆಲ ತಾಪಮಾನ ಸಂವೇದಕಗಳು ಮತ್ತು ಬಳಸದ ಬ್ಯಾಟರಿ ಕೋಶಗಳು ಅಸಮರ್ಪಕವಾಗಿ ಕೆಲಸ ಮಾಡಲಾರಂಭಿಸಿವೆ ಎಂದು ಜಾಕ್ಸಾ ಹೇಳಿದೆ. ಆದಾಗ್ಯೂ ಲ್ಯಾಂಡರ್ ಹೊಸ ಚಿತ್ರಗಳನ್ನು ಭೂಮಿಗೆ ರವಾನಿಸಿದೆ.