ನವದೆಹಲಿ:ಉತ್ತರಾಖಂಡದ ಪಿಥೋರ್ಗಢ ಜಿಲ್ಲೆಯಲ್ಲಿ ಹಿಮನದಿಯೊಂದು ಕರಗುತ್ತಿರುವ ಘಟನೆ ನಡೆದ ಕೆಲವೇ ದಿನಗಳ ನಂತರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹಿಮಾಲಯದಲ್ಲಿನ ಹಿಮನದಿಗಳು ಕ್ಷೀಣಿಸುತ್ತಿರುವ ಚಿತ್ರವೊಂದನ್ನು ಸೆರೆಹಿಡಿದಿದೆ. ಇದು ಅಪಾಯಕಾರಿ ಬೆಳವಣಿಗೆ ಎಂದು ಆತಂಕ ವ್ಯಕ್ತಪಡಿಸಿದೆ.
ಭಾರತೀಯ ಬಾಹ್ಯಾಕಾಶ ಸಂಸ್ಥೆಯ ದಶಕಗಳ ಉಪಗ್ರಹ ಚಿತ್ರಗಳನ್ನು ತಾಳೆ ಹಾಕಿ ನೋಡಲಾಗಿದ್ದು, ಹಿಮಾಲಯದಾದ್ಯಂತ ಹಿಮನದಿಗಳು ವ್ಯಾಪಕವಾಗಿ ಕರಗುತ್ತಿವೆ. ಹಿಮನದಿಗಳು ಮತ್ತು ಹಿಮದ ಹೊದಿಕೆಯಿಂದಾಗಿ ಮೂರನೇ ಧ್ರುವ ಎಂದು ಕರೆಯಲ್ಪಡುವ ಪ್ರದೇಶವು ಕಂಡು ಕೇಳರಿಯದಷ್ಟು ವೇಗದಲ್ಲಿ ಕರಗುತ್ತಿವೆ. ಇದು ಮುಂದಿನ ದಿನಗಳಲ್ಲಿ ಭಾರೀ ಅನಾಹುತಗಳನ್ನು ತಂದೊಡ್ಡಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಹಿಮ ಸರೋವರಗಳು ಗಮನಾರ್ಹ ಕುಸಿತ ಕಾಣುತ್ತಿರುವ ಉಪಗ್ರಹ ಚಿತ್ರಣವು ವಿಶೇಷವಾಗಿ, ಭಾರತಕ್ಕೆ ಹೆಚ್ಚು ಅಪಾಯ ಇದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ತಿಳಿಸಿದೆ. ಕಳೆದ ಮೂರ್ನಾಲ್ಕು ದಶಕಗಳಲ್ಲಿ ಸಂಗ್ರಹಿಸಿದ ಉಪಗ್ರಹ ಮಾಹಿತಿ ಆಧಾರದ ಮೇಲೆ ಹಿಮನದಿಯಲ್ಲಿ ಸಂಭವಿಸುತ್ತಿರುವ ಬದಲಾವಣೆಗಳ ಬಗ್ಗೆ ಅಮೂಲ್ಯ ಮಾಹಿತಿ ನೀಡಿದೆ.
ಹಿಗ್ಗುತ್ತಿರುವ ಸರೋವರಗಳ ವ್ಯಾಪ್ತಿ:1984 ರಿಂದ 2023 ರವರೆಗಿನ ಭಾರತೀಯ ಹಿಮಾಲಯ ನದಿ ಜಲಾನಯನ ಪ್ರದೇಶಗಳನ್ನು ಒಳಗೊಂಡ ಉಪಗ್ರಹ ಚಿತ್ರಗಳು ಹಿಮ ಸರೋವರಗಳಲ್ಲಿ ಆದ ಗಮನಾರ್ಹ ಬದಲಾವಣೆಗಳನ್ನು ಸೂಚಿಸುತ್ತದೆ. 2016-17ರಲ್ಲಿ 2,341 ಸರೋವರಗಳಲ್ಲಿ 10 ಹೆಕ್ಟೇರ್ನಷ್ಟು ಹಿಗ್ಗಿದ್ದು ಕಂಡು ಬಂದಿತ್ತು. 1984 ರಿಂದ ಈವರೆಗೂ 676 ಹಿಮ ಸರೋವರಗಳು ಹೆಚ್ಚಿನ ಪ್ರಮಾಣದಲ್ಲಿ ವಿಸ್ತರಿಸಲ್ಪಟ್ಟಿವೆ ಎಂದು ಪತ್ತೆ ಮಾಡಲಾಗಿದೆ.
ಭಾರತದ ವ್ಯಾಪ್ತಿಯಲ್ಲಿ ಬರುವ ಹಿಮ ಸರೋವರಗಳೂ ಕರಗುತ್ತಿವೆ. ಇದು ಮುಂದಿನ ಅಪಾಯದ ಮುನ್ಸೂಚನೆಯಾಗಿದೆ. 132 ಸರೋವರಗಳು ಭಾರತದೊಳಗೆ ಹರಿಯುತ್ತವೆ. ಇದರಲ್ಲಿ ಸಿಂಧೂ(67), ಗಂಗಾ (7) ಮತ್ತು ಬ್ರಹ್ಮಪುತ್ರ ನದಿಯ (58) ಜಲಾನಯನ ಪ್ರದೇಶದಲ್ಲಿ ಬರುತ್ತವೆ. ಇವುಗಳು ಹವಾಮಾನ ಬದಲಾವಣೆ, ತಾಪಮಾನ ಮತ್ತು ಭೌತಿಕ, ಸಾಮಾಜಿಕ ಕಾರಣಗಳಿಂದ ಕರಗಲು ಆರಂಭಿಸಿವೆ. ಹದಿನೆಂಟನೇ ಶತಮಾನದಲ್ಲಿ ಕೈಗಾರಿಕಾ ಕ್ರಾಂತಿಯ ಆರಂಭದಿಂದಲೂ ಜಗತ್ತಿನಾದ್ಯಂತ ಹಿಮನದಿಗಳು ವಿಸ್ತರಿಸುತ್ತಿರುವ ಬಗ್ಗೆ ವಿಶ್ವಾದ್ಯಂತ ನಡೆಸಲಾದ ಸಂಶೋಧನೆಯು ದೃಢಪಡಿಸಿದೆ.