ಬೆಂಗಳೂರು: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಮತ್ತು ಹಲ್ಲೆ ಯತ್ನ ಪ್ರಕರಣ ಸಂಬಂಧ ವಿಧಾನಸಭಾ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಇಂದು ಸಿಐಡಿ ಮುಂದೆ ಹಾಜರಾಗಿ ಹೇಳಿಕೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರ ಹಾಗೂ ಡಿ.ಎಸ್. ಅರುಣ್ ಅವರು ಸಿ.ಟಿ. ರವಿ ಅವರಿಗೆ ಜೀವ ಬೆದರಿಕೆ ಹಾಕಿರುವ ಸಂಬಂಧ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ದೂರು ನೀಡಿದ್ದರು. ಸಭಾಪತಿ ಅವರು ಕಾರ್ಯದರ್ಶಿ ಮೂಲಕ ಹಿರೇಬಾಗೇವಾಡಿ ಪೊಲೀಸರಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣ ಸಿಐಡಿಗೆ ಹಸ್ತಾಂತರ ಆಗಿದ್ದರಿಂದ ಸಿಐಡಿ ತನಿಖಾಧಿಕಾರಿ ಮುಂದೆ ವಿಚಾರಣೆಗೆ ಜ.6ರಂದು ಗೈರಾಗಿದ್ದ ಹಿನ್ನೆಲೆಯಲ್ಲಿ ಸಿ.ಟಿ. ರವಿ ಅವರಿಗೆ ಇಂದು ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ಸಂಬಂಧ ಸಿ.ಟಿ. ರವಿ ಅವರು ತನಿಖಾಧಿಕಾರಿ ಕೇಶವಮೂರ್ತಿ ಮುಂದೆ ಹಾಜರಾಗಿ 1 ಗಂಟೆಗಳ ಕಾಲ ವಿಚಾರಣೆ ಎದುರಿಸಿದರು.
ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಟಿ.ರವಿ, ಚಳಿಗಾಲ ಅಧಿವೇಶನದ ಕೊನೆ ದಿನವಾಗಿದ್ದ ಡಿ.19ರಂದು ಸುವರ್ಣಸೌಧದ ಪಶ್ಚಿಮ ದ್ವಾರದ ಬಳಿ ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಅಂದು ಸಂಜೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ಜೊತೆ ಚರ್ಚೆ ನಡೆಸಿ ಪರಿಷತ್ ಕಡೆ ಬರುವ ಮೊಗಸಾಲೆ ಬಳಿ ಹಲ್ಲೆಗೆ ಯತ್ನಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಸಿಐಡಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ್ದೇನೆ ಎಂದರು.
ವಿಚಾರಣೆ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹೋದರ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಸೇರಿ ಇಬ್ಬರ ಹೆಸರು ಹೇಳಿದ್ದೇನೆ. ಹಲ್ಲೆ ನಡೆಸಿದರು ಯಾರು ? ಅಲ್ಲಿ ಯಾರೆಲ್ಲಾ ಇದ್ದು, ಘೋಷಣೆ ಕೂಗಿದರು ಎಂಬ ಬಗ್ಗೆ ಮಾಹಿತಿ ನೀಡಿದ್ದೇನೆ. ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯ ತೋರಿಸಿದರೆ ಗುರುತಿಸುವುದಾಗಿ ತನಿಖಾಧಿಕಾರಿಗಳಿಗೆ ಹೇಳಿದ್ದೇನೆ ಎಂದು ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ಆಕ್ಷೇಪಾರ್ಹ ಹೇಳಿಕೆ ಆರೋಪ ಸಂಬಂಧ ಸಚಿವೆ ಲಕ್ಷ್ಮೀ ಹೆಬಾಳ್ಕರ್ ದೂರು ನೀಡಿದ್ದಾರೆ. ಆದರೆ ವಿಧಾನ ಪರಿಷತ್‌ನಲ್ಲಿ ಅಧಿಕಾರ ಇರುವುದು ಸಭಾಪತಿಗಳಿಗೆ. ಹೀಗಾಗಿ ಅವರು ಕ್ರಮ ಕೈಗೊಳ್ಳಲಿದ್ದಾರೆ. ನನ್ನ ಮೇಲೆ ಹಲ್ಲೆಯಾಗಿದೆ ಎಂದು ಖಾನಾಪುರ ಠಾಣೆಯಲ್ಲಿ ದೂರು ನೀಡಿದ್ದು, 20 ದಿನವಾದರೂ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಪೊಲೀಸ್ ದೌರ್ಜನ್ಯ ಆರೋಪ : ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ ಸಿ ಟಿ ರವಿ
ಇದನ್ನೂ ಓದಿ: ತಕ್ಷಣವೇ ಸಿ.ಟಿ.ರವಿ ಬಿಡುಗಡೆಗೆ ಆದೇಶಿಸಿ 'ಜನಪ್ರತಿನಿಧಿಗಳಾಗಿ ಆರೋಪಿ, ದೂರುದಾರರ ವರ್ತನೆ ದುರದೃಷ್ಟಕರ' ಎಂದ ಹೈಕೋರ್ಟ್