ಶ್ರೀಹರಿಕೋಟಾ(ಆಂಧ್ರ ಪ್ರದೇಶ): ಯುರೋಪಿಯನ್ ಸ್ಪೇಸ್ ಏಜೆನ್ಸಿಯ (ಇಎಸ್ಎ) ಎರಡು ಉಪಗ್ರಹಗಳನ್ನು ಹೊತ್ತ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯ ವಿಶ್ವಾಸಾರ್ಹ ಪಿಎಸ್ಎಲ್ವಿ ರಾಕೆಟ್ ಗುರುವಾರ ಸಂಜೆ 4 ಗಂಟೆ 4 ನಿಮಿಷಕ್ಕೆ ಇಲ್ಲಿನ ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆಗೊಂಡಿತು. ಕ್ಷಣಗಣನೆ ಮುಗಿಯುತ್ತಿದ್ದಂತೆ ಪಿಎಸ್ಎಲ್ವಿಸಿ-59 ಪ್ರೋಬಾ-3 ಬಾಹ್ಯಾಕಾಶ ನೌಕೆಯನ್ನು ಅಪೇಕ್ಷಿತ ಕಕ್ಷೆಯಲ್ಲಿ ಇರಿಸಲು ಬಾಹ್ಯಾಕಾಶಕ್ಕೆ ಹಾರಿತು.
ಹೆಮ್ಮೆಯ ಕ್ಷಣ- ಇಸ್ರೋ: ರಾಕೆಟ್ ಉಡಾವಣೆಯ ನಂತರ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಇಸ್ರೊ, "ಲಿಫ್ಟ್ ಆಫ್ ಪ್ರಕ್ರಿಯೆ ಯಶಸ್ವಿಯಾಗಿದೆ. ಇಸ್ರೋದ ತಾಂತ್ರಿಕ ಪರಿಣತಿಯೊಂದಿಗೆ ಇಎಸ್ಎಯ ಅದ್ಭುತ ಪ್ರೊಬಾ -3 ಉಪಗ್ರಹಗಳನ್ನು ನಿಯೋಜಿಸಲು ಪಿಎಸ್ಎಲ್ವಿ-ಸಿ 59 ಯಶಸ್ವಿಯಾಗಿ ಆಕಾಶಕ್ಕೆ ಹಾರಿದೆ. ಇದು ಎನ್ಎಸ್ಐಎಲ್ ನೇತೃತ್ವದ ಜಾಗತಿಕ ಕಾರ್ಯಾಚರಣೆಯ ಪ್ರಾರಂಭದ ಸೂಚನೆ. ಅಂತಾರಾಷ್ಟ್ರೀಯ ಸಹಯೋಗ ಮತ್ತು ಭಾರತದ ಬಾಹ್ಯಾಕಾಶ ಸಾಧನೆಗಳನ್ನು ಆಚರಿಸುವ ಹೆಮ್ಮೆಯ ಕ್ಷಣ" ಎಂದು ಬರೆದಿದೆ.
ಪ್ರೋಬಾ-3 (ಪ್ರಾಜೆಕ್ಟ್ ಫಾರ್ ಆನ್‌ಬೋರ್ಡ್ ಅನಾಟಮಿ) ಎರಡು ಉಪಗ್ರಹಗಳನ್ನು ಒಳಗೊಂಡಿದೆ. ಈ ಎರಡು ಬಾಹ್ಯಾಕಾಶ ನೌಕೆಗಳು ಒಂದಾಗಿ ಹಾರುತ್ತವೆ. ಸೂರ್ಯನ ಹೊರಗಿನ ವಾತಾವರಣವಾದ ಕರೋನಾವನ್ನು ಅಧ್ಯಯನ ಮಾಡಲು ಒಂದೇ ಮಿಲಿಮೀಟರ್ವರೆಗಿನ ನಿಖರವಾದ ರಚನೆಯನ್ನು ಕಾಪಾಡಿಕೊಳ್ಳುತ್ತವೆ.
ಪ್ರೊಬಾಸ್ ಎಂದರೆ?: ಇಸ್ರೋದ ವಾಣಿಜ್ಯ ಅಂಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಇಎಸ್ಎಯಿಂದ ಈ ಉಡಾವಣೆಯ ಗುತ್ತಿಗೆಯನ್ನು ಪಡೆದುಕೊಂಡಿದೆ. 44.5 ಮೀಟರ್ ಎತ್ತರದ ಧ್ರುವೀಯ ಉಪಗ್ರಹ ಉಡಾವಣಾ ವಾಹನವು ಮೊದಲ ಉಡಾವಣಾ ಪ್ಯಾಡ್ನಿಂದ ಸಂಜೆ 4.04ಕ್ಕೆ ಉಡಾವಣೆಯಾಯಿತು. 'ಪ್ರೊಬಾಸ್' ಎಂಬುದು ಲ್ಯಾಟಿನ್ ಪದವಾಗಿದ್ದು, 'ಪ್ರಯತ್ನಿಸೋಣ' ಎಂಬುದು ಇದರ ಅರ್ಥವಾಗಿದೆ.