ನವದೆಹಲಿ: ಟ್ವಿಟರ್ (ಈಗಿನ ಎಕ್ಸ್)ಗೆ ಪರ್ಯಾಯವಾಗಿ ಹುಟ್ಟಿಕೊಂಡಿದ್ದ ಸ್ವದೇಶಿ ಮೈಕ್ರೋ ಬ್ಲಾಗಿಂಗ್ ಆ್ಯಪ್ 'ಕೂ' ಇದೀಗ ತನ್ನ ಕಾರ್ಯಾಚರಣೆ ನಿಲ್ಲಿಸಲು ಸಜ್ಜಾಗಿದೆ. ಕನ್ನಡ ಸೇರಿದಂತೆ 10 ಸ್ಥಳೀಯ ಭಾಷೆಗಳಲ್ಲಿ ಸೇವೆ ನೀಡುತ್ತಿದ್ದ ಈ ಸಾಮಾಜಿಕ ಜಾಲತಾಣದ ವೇದಿಕೆ 2020ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿಕೊಂಡಿತ್ತು.
ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಸಂಸ್ಥೆ ಹಲವು ಕಂಪನಿಗಳೊಂದಿಗೆ ನಡೆಸಿದ ಸಹಭಾಗಿತ್ವದ ಮಾತುಕತೆ ವಿಫಲವಾದ ಹಿನ್ನೆಲೆ ಈ ಸಾಮಾಜಿಕ ಜಾಲತಾಣ ಸಾರ್ವಜನಿಕ ಸೇವೆಯಿಂದ ಹೊರ ನಡೆದಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಘೋಷಿಸಿದ್ದಾರೆ.
ಲಿಂಕ್ಡಿನ್ನಲ್ಲಿ ಈ ಕುರಿತು ಪ್ರಕಟಿಸಿರುವ ಸಂಸ್ಥೆಯ ಸಂಸ್ಥಾಪಕರಾದ ಅಪ್ರಮೇಯ ರಾಧಾಕೃಷ್ಣ ಮತ್ತು ಮಯಾಂಕ್ ಬುಡಲತ್ಕಾ, ಅನೇಕ ದೊಡ್ಡ ದೊಡ್ಡ ಇಂಟರ್ನೆಟ್ ಕಂಪನಿಗಳು, ಸಂಘಟಿತ ಸಂಸ್ಥೆ ಮತ್ತು ಮಾಧ್ಯಮ ಸಂಸ್ಥೆಗಳೊಂದಿಗೆ ಪಾಲುದಾರಿಕೆಗೆ ಹುಡುಕಾಟ ನಡೆಸಿದೆವು. ಆದರೆ, ಇದು ಫಲ ನೀಡಲಿಲ್ಲ. ಬಹುತೇಕರು ನಮ್ಮ ಬಳಕೆದಾರ ರಚಿತ ವಿಷಯ ಮತ್ತು ಸಾಮಾಜಿಕ ಸಂಸ್ಥೆಯ ಕೆಲಸದ ಪ್ರವೃತ್ತಿಯೊಂದಿಗೆ ಕಾರ್ಯ ನಿರ್ವಹಿಸುವ ಆಸಕ್ತಿ ತೋರಲಿಲ್ಲ ಎಂದು ತಿಳಿಸಿದ್ದಾರೆ.
ಟೈಗರ್ ಗ್ಲೋಬಲ್ ಮತ್ತು ಎಕ್ಸೆಲ್ ಸೇರಿದಂತೆ ಪ್ರಮುಖ ಕಂಪನಿಗಳ ಹೂಡಿಕೆಯಿಂದ ಕೂ 60 ಮಿಲಿಯನ್ ಡಾಲರ್ ಸಂಗ್ರಹಿಸಿದರೂ ಸಂಸ್ಥೆ ಕಳೆದ ವರ್ಷಗಳಲ್ಲಿ ಬಳಕೆದಾರರ ಮತ್ತು ಆದಾಯದ ವಿಚಾರದಲ್ಲಿ ಕೆಲವು ಸವಾಲಗಳನ್ನು ಎದುರಿಸಿ, ಆರ್ಥಿಕ ಸಂಕಷ್ಟಕ್ಕೆ ಒಳಗಾಗಿತ್ತು. ಕಳೆದ ಫೆಬ್ರವರಿಯಲ್ಲಿ ಡೈಲಿಹಂಟ್ ಮಾಧ್ಯಮ ಸಂಸ್ಥೆ ಕೂವನ್ನು ಕೊಳ್ಳುವ ಕುರಿತು ಅಂತಿಮ ಹಂತದ ಮಾತುಕತೆ ನಡೆಸಿತು. ಆದರೆ, ಇದು ಕೂಡ ಫಲ ನೀಡಲಿಲ್ಲ.
ಇನ್ನು ಪೋಸ್ಟ್ನಲ್ಲಿ ಮುಂದುವರೆದು ತಿಳಿಸಿರುವ ಸಂಸ್ಥಾಪಕರು, ನಮ್ಮ ಉತ್ತುಂಗ ಕಾಲದಲ್ಲಿ ನಾವು ದಿನಕ್ಕೆ 2.1 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದ್ದು, 10 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರಿದ್ದರು. ಅನೇಕ ಕ್ಷೇತ್ರಗಳಲ್ಲಿ ಪ್ರಮುಖ ವ್ಯಕ್ತಿಗಳು ಸೇರಿದಂತೆ 9000 ವಿಐಪಿಗಳು ಕೂಡ ಬಳಕೆದಾರರಾಗಿದ್ದರು. ಜುಲೈ 2022ರಲ್ಲಿ ಆ್ಯಪ್ ಮಾಸಿಕ ಸಕ್ರಿಯ ಬಳಕೆದಾರರು 9 ಮಿಲಿಯನ್ಗಿಂತ ಹೆಚ್ಚಿದ್ದರು. ಆದರೂ ಸಂಸ್ಥೆಯು ಹೆಚ್ಚುವರಿ ಧನ ಸಂಗ್ರಹ ನಡೆಸುವಲ್ಲಿ ವಿಫಲವಾಗಿತ್ತು. ಇದರ ಪರಿಣಾಮವಾಗಿ ವೆಚ್ಚ ಕಡಿತಗೊಳಿಸಲು ಉದ್ಯೋಗಿಗಳ ಸಂಖ್ಯೆಯಲ್ಲೂ ಕಡಿತ ಮಾಡಲಾಗಿತ್ತು. (ಐಎಎನ್ಎಸ್)
ಇದನ್ನೂ ಓದಿ:ವಿದೇಶಿ ಆ್ಯಪ್ಗಳ ನಡುವೆ ಜನಪ್ರಿಯತೆ ಪಡೆಯುತ್ತಿರುವ ಕನ್ನಡದ 'ಕೂ' ಆ್ಯಪ್