ನವದೆಹಲಿ: ಭಾರತದ ಕೃತಕ ಬುದ್ಧಿಮತ್ತೆ (ಎಐ) ಮಾರುಕಟ್ಟೆ ಶೇಕಡಾ 25 ರಷ್ಟು ಸಂಯೋಜಿತ ವಾರ್ಷಿಕ ಬೆಳವಣಿಗೆ ದರದಲ್ಲಿ (ಸಿಎಜಿಆರ್) ಬೆಳೆಯುವ ಸಾಧ್ಯತೆಯಿದೆ ಹಾಗೂ 2027 ರ ವೇಳೆಗೆ ಇದು 17 ಬಿಲಿಯನ್ ಡಾಲರ್ ತಲುಪುವ ಸಾಧ್ಯತೆಯಿದೆ ಎಂದು ನಾಸ್ಕಾಮ್ ವರದಿ ತಿಳಿಸಿದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆ ಬಿಸಿಜಿ ಸಹಭಾಗಿತ್ವದಲ್ಲಿ ನಾಸ್ಕಾಮ್ ತಯಾರಿಸಿದ ವರದಿಯ ಪ್ರಕಾರ, ಜೆಎನ್ಎಐ ಸೇರಿದಂತೆ ಭಾರತದ ಎಐ ಮಾರುಕಟ್ಟೆ ಎಐ / ಎಂಎಲ್ ವಿಭಾಗದಲ್ಲಿ ಬೆಳೆಯುತ್ತಿದೆ. ಇದು 2023 ರಲ್ಲಿ ಐಟಿ ವಲಯವು ಅತಿ ಹೆಚ್ಚು ಖರ್ಚು ಮಾಡುತ್ತಿರುವ ವರ್ಗವಾಗಿ ಹೊರ ಹೊಮ್ಮುತ್ತಿದೆ.
ಎಂಟರ್ ಪ್ರೈಸ್ ತಂತ್ರಜ್ಞಾನ ವೆಚ್ಚದಲ್ಲಿನ ಹೆಚ್ಚಳ, ಭಾರತದ ಎಐ ಪ್ರತಿಭಾವಂತರ ಸಂಖ್ಯೆಯಲ್ಲಿನ ಏರಿಕೆ ಮತ್ತು ಎಐ ಹೂಡಿಕೆಗಳಲ್ಲಿ ಗಮನಾರ್ಹ ಹೆಚ್ಚಳ ಸೇರಿದಂತೆ ಅನೇಕ ಅಂಶಗಳು ಈ ಬೆಳವಣಿಗೆಗೆ ಕಾರಣವಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಜೆನ್ ಎಐ ತಂತ್ರಜ್ಞಾನದ ಈ ಸಮಯದಲ್ಲಿ ಭಾರತೀಯ ಟೆಕ್ ಕಂಪನಿಗಳು ಸಾಂಪ್ರದಾಯಿಕ ಐಟಿ ಮತ್ತು ವ್ಯವಹಾರ ಪ್ರಕ್ರಿಯೆ ನಿರ್ವಹಣೆಗೆ ಮಾತ್ರವಲ್ಲದೇ ಎಐ - ಚಾಲಿತ ವಿಶ್ಲೇಷಣೆ, ಇಂಟೆಲಿಜೆಂಟ್ ಆಟೋಮೇಷನ್ ಮತ್ತು ವೈಯಕ್ತಿಕಗೊಳಿಸಿದ ಗ್ರಾಹಕರ ಸಂವಹನಗಳನ್ನು ಒಳಗೊಂಡಂತೆ ತಮ್ಮ ಕಾರ್ಯಚಟುವಟಿಕೆಗಳ ಪರಿಧಿಗಳನ್ನು ವಿಸ್ತರಿಸುತ್ತಿವೆ ಎಂದು ನಾಸ್ಕಾಮ್ ಅಧ್ಯಕ್ಷ ದೇಬ್ಜಾನಿ ಘೋಷ್ ಹೇಳಿದರು.
ಎಐ ಸಂಬಂಧಿತ ಉದ್ಯೋಗಗಳಲ್ಲಿ 4,20,000 ಉದ್ಯೋಗಿಗಳು ಕೆಲಸ ಮಾಡುವ ಮೂಲಕ ಭಾರತವು ಇಂದು ಎರಡನೇ ಅತಿ ಹೆಚ್ಚು ಎಐ ಪ್ರತಿಭಾವಂತರನ್ನು ಹೊಂದಿದ ದೇಶವಾಗಿದೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತವು ಮೂರು ಪಟ್ಟು ಹೆಚ್ಚು ಎಐ ನುರಿತ ಪ್ರತಿಭೆಗಳನ್ನು ಹೊಂದಿದೆ.