ಚಂಡೀಪುರ (ಒಡಿಶಾ): ಅಗ್ನಿ- 4 ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ. ಅಬ್ದುಲ್ ಕಲಾಂ ದ್ವೀಪದಲ್ಲಿ ಅಗ್ನಿ- 4 ಕ್ಷಿಪಣಿಯ ನಿನ್ನೆ ಸಂಜೆ ಪರೀಕ್ಷೆ ನಡೆಸಲಾಯಿತು. ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಕ್ಷಿಪಣಿಯನ್ನು ಅಬ್ದುಲ್ ಕಲಾಂ ದ್ವೀಪದ ಉಡಾವಣಾ ಪ್ಯಾಡ್ ನಂ. 4 ರಿಂದ ಸಂಜೆ 7:55 ಕ್ಕೆ ಉಡಾವಣೆ ಮಾಡಲಾಯಿತು. ಕ್ಷಿಪಣಿಯು 4,000 ಕಿ.ಮೀ. ವ್ಯಾಪ್ತಿ ಹೊಂದಿದೆ.
ಅಬ್ದುಲ್ ಕಲಾಂ ದ್ವೀಪದಿಂದ ಪ್ರಯೋಗಗಳು: ಸ್ವದೇಶಿ ನಿರ್ಮಿತ ಅಗ್ನಿ- 4 ಬಾಲೇಶ್ವರದ ಅಬ್ದುಲ್ ಕಲಾಂ ದ್ವೀಪದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಕ್ಷಿಪಣಿ 20 ಮೀಟರ್ ಉದ್ದ ಮತ್ತು 17,000 ಕಿಲೋಗ್ರಾಂಗಳಷ್ಟು ತೂಕವನ್ನು ಹೊಂದಿದೆ. ಉಡಾವಣೆಯ ಸಮಯದಲ್ಲಿ, ಕ್ಷಿಪಣಿಯು ಎಲ್ಲಾ ಕಾರ್ಯಾಚರಣೆ ಮತ್ತು ತಾಂತ್ರಿಕ ನಿಯತಾಂಕಗಳನ್ನು ಪೂರೈಸಿದೆ. ಅಷ್ಟೇ ಅಲ್ಲ ನಿಗದಿತ ಸಮಯದೊಳಗೆ ಗುರಿ ಮುಟ್ಟಿದೆ ಎಂದು ಡಿಆರ್‌ಡಿಒ ಅಧಿಕಾರಿಗಳು ಬಹಿರಂಗ ಪಡಿಸಿದ್ದಾರೆ.
ಸೇನೆಯ ಸ್ಟ್ರಾಟೆಜಿಕ್ ಫೋರ್ಸ್ ಕಮಾಂಡ್ ನಿರ್ದೇಶನದ ಮೇರೆಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಪರೀಕ್ಷೆ ನಡೆಸಿತು. ಕ್ಷಿಪಣಿ ಪರೀಕ್ಷೆ ನಡೆಸಿದ ವಿಜ್ಞಾನಿಗಳು ಮತ್ತು ರಕ್ಷಣಾ ಅಧಿಕಾರಿಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದನೆ ಸಲ್ಲಿಸಿದ್ದಾರೆ.